ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್‌ ಆಪ್ತನಿಂದ ಜಾತಿ ಅಸ್ತ್ರ

By
3 Min Read

– ಡೊನಾಲ್ಡ್‌ ಟ್ರಂಪ್‌ ವ್ಯಾಪಾರ ಸಲಹೆಗಾರ ಪೀಟರ್ ನವರೊ ಹೇಳಿಕೆ
– ರಷ್ಯಾ-ಉಕ್ರೇನ್‌ ಯುದ್ಧವನ್ನು ಮೋದಿ ಯುದ್ಧ ಎಂದಿದ್ದ ನವರೊ

ವಾಷಿಂಗ್ಟನ್‌: ರಷ್ಯಾ-ಉಕ್ರೇನ್‌ ಯುದ್ಧವನ್ನು ಮೋದಿ ಯುದ್ಧ (Modis War) ಎಂದು ಕರೆದಿದ್ದ ಡೊನಾಲ್ಡ್‌ ಟ್ರಂಪ್‌ (Donald Trump) ವ್ಯಾಪಾರ ಸಲಹೆಗಾರ ಪೀಟರ್ ನವರೊ (Peter Navarro) ಈಗ ಭಾರತದವರನ್ನು ಪ್ರಚೋದಿಸಲು ಜಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.

ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಬ್ರಾಹ್ಮಣರು (Brahmins) ಭಾರತೀಯ ಜನರ ವೆಚ್ಚದಲ್ಲಿ ಶ್ರೀಮಂತರಾಗುತ್ತಿದ್ದಾರೆ ಎಂದು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ (SCO Summit) ಮೋದಿ, ಪುಟಿನ್‌, ಕ್ಸಿ ಜಿನ್‌ಪಿಂಗ್‌ ಮಾತುಕತೆ ನಡೆಸುತ್ತಿರುವ ಮಹತ್ವದ ಸಮಯದಲ್ಲೇ ಈ ಹೇಳಿಕೆ ಬಂದಿರುವುದು ವಿಶೇಷ.

ಟಿವಿ ವಾಹಿನಿಯ ಜೊತೆ ಮಾತನಾಡಿದ ಪೀಟರ್ ನವರೊ, ಮೋದಿ ಒಬ್ಬ ಮಹಾನ್ ನಾಯಕ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವಾಗ ಅವರು ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಜೊತೆ ಯಾಕೆ ಮಾತನಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ನಾನು ಭಾರತೀಯ ಜನರಿಗೆ ಹೇಳುತ್ತೇನೆ, ದಯವಿಟ್ಟು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಭಾರತೀಯ ಜನರ ವೆಚ್ಚದಲ್ಲಿ ಬ್ರಾಹ್ಮಣರು ಲಾಭ ಗಳಿಸಿ ಶ್ರೀಮಂತರಾಗುತ್ತಿದ್ದಾರೆ. ಇದನ್ನು ನಾವು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ತನ್ನ ಒತ್ತಡಕ್ಕೆ ಭಾರತ (India) ಬಗ್ಗದೇ ಸೆಡ್ಡು ಹೊಡೆದ ಬೆನ್ನಲ್ಲೇ ಹತಾಶೆಗೊಂಡಿರುವ ಟ್ರಂಪ್‌ (Donald Trump) ಸರ್ಕಾರದ ಅಧಿಕಾರಿಗಳು ಈಗ ನರೇಂದ್ರ ಮೋದಿ (Narendra Modi) ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ 50% ತೆರಿಗೆ ಹಾಕಿ ಯುರೋಪ್‌ಗೆ ಅಮೆರಿಕ ಮನವಿ

ಹಿಂದೆ ಪೀಟರ್ ನವರೊ ಹೇಳಿದ್ದೇನು?
ರಷ್ಯಾದ ಇಂಧನವನ್ನು ಭಾರತ ನಿರಂತರವಾಗಿ ಖರೀದಿಸುತ್ತಿರುವುದರಿಂದ ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿದೆ. ಮಾಸ್ಕೋದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿದರೆ ಅಮೆರಿಕ ಭಾರತದ ಮೇಲೆ ವಿಧಿಸಿದ 25% ಸುಂಕ ಕಡಿತ ಕಾಣಬಹುದು.

ರಷ್ಯಾದಿಂದ ಭಾರತ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸುತ್ತದೆ. ಖರೀದಿಸಿದ ಕಚ್ಚಾತೈಲವನ್ನು ರಿಫೈನರಿಯಲ್ಲಿ ಸಂಸ್ಕರಿಸಿ ಬೇರೆ ದೇಶಗಳಿಗೆ ಮಾರಾಟ ಮಾಡುವ ಮೂಲಕ ಲಾಭ ಮಾಡುತ್ತಿದೆ. ಈ ನಿರ್ಧಾರದಿಂದ ಭಾರತ ರಷ್ಯಾಕ್ಕೆ ಸಹಾಯ ಮಾಡಿದರೆ ಅಮೆರಿಕಕ್ಕೆ ಹಾನಿ ಮಾಡುತ್ತಿದೆ. ಇದನ್ನೂ ಓದಿಒಂದಲ್ಲ, 4 ಬಾರಿ ಟ್ರಂಪ್‌ ಕರೆ ಮಾಡಿದ್ರೂ ಉತ್ತರಿಸದ ಮೋದಿ!

ಭಾರತ ಮಾಡುತ್ತಿರುವ ಕೆಲಸದಿಂದಾಗಿ ಅಮೆರಿಕದಲ್ಲಿ ಪ್ರತಿಯೊಬ್ಬರೂ ನಷ್ಟ ಅನುಭವಿಸುತ್ತಾರೆ. ಭಾರತದ ಹೆಚ್ಚಿನ ಸುಂಕಗಳು ನಮ್ಮ ಉದ್ಯೋಗಗಳು, ಕಾರ್ಖಾನೆಗಳನ್ನು ಕಸಿದುಕೊಳ್ಳುತ್ತಿದೆ. ಅಮೆರಿಕನ್ನರು ಆರ್ಥಿಕವಾಗಿ ಬಳಲುತ್ತಿರುವಾಗ ಉಕ್ರೇನ್‌ ಯುದ್ಧಕ್ಕೆ ರಷ್ಯಾಕ್ಕೆ ಹಣಕಾಸಿನ ಸಹಾಯ ಮಾಡುತ್ತಿದೆ. ಇನ್ನೊಂದು ಕಡೆ ಉಕ್ರೇನ್‌ ನೆರವು ನೀಡುವಂತೆ ಅಮೆರಿಕ ಮತ್ತು ಯುರೋಪ್‌ ದೇಶವನ್ನು ಕೇಳಿಕೊಳ್ಳುತ್ತಿದೆ.

ಭಾರತಕ್ಕೆ ಈಗ ಅಹಂಕಾರ ಬಂದಿದೆ. ನಮಗೆ ಹೆಚ್ಚಿನ ಸುಂಕಗಳು ಇಲ್ಲ. ನಮ್ಮದು ಸಾರ್ವಭೌಮ ಹೊಂದಿದ ದೇಶ. ನಾವು ಯಾರಿಂದ ಬೇಕಾದರೂ ತೈಲ ಖರೀದಿಸಬಹುದು ಎಂಬಂತೆ ಭಾರತ ವರ್ತಿಸುತ್ತಿದೆ. ಭಾರತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಹೌದು. ಆದರೆ ಅಮೆರಿಕದ ವಿಶ್ವದ ದೊಡ್ಡ ಆರ್ಥಿಕತೆತಯನ್ನು ಹೊಂದಿದ ದೇಶವಾಗಿದೆ. ಭಾರತ ಮಾಡುತ್ತಿರುವ ಕೆಲಸಗಳಿಂದ ಅಮೆರಿಕದಲ್ಲಿರುವ ಪ್ರತಿಯೊಬ್ಬರೂ ನಷ್ಟ ಅನುಭವಿಸುತ್ತಿದ್ದಾರೆ ಎಂದರು.

Share This Article