ಕೋಟೇಶ್ವರದಿಂದ ಕುಕ್ಕೆಗೆ ಹೊರಟ ಬ್ರಹ್ಮರಥ- ಉಡುಪಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ

Public TV
1 Min Read

ಉಡುಪಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಿತಗೊಳ್ಳುವ ಬ್ರಹ್ಮರಥ ಉಡುಪಿಯಿಂದ ಮೆರವಣಿಗೆ ಹೊರಟಿದೆ. ಕುಕ್ಕೆಯ ಬ್ರಹ್ಮರಥ ಬಹಳ ಹಳೆಯದಾಗಿದ್ದು, ಜೀರ್ಣಾವಸ್ಥೆಗೆ ತಲುಪಿತ್ತು. ಹೀಗಾಗಿ ದೇವಸ್ಥಾನ ಸಮಿತಿ ನೂತನ ರಥ ರಚನೆ ಮಾಡಬೇಕೆಂದು ತೀರ್ಮಾನಿಸಿತ್ತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಮತ್ತು ಉದ್ಯಮಿ ಅಜಿತ್ ಶೆಟ್ಟಿಯವರು ತಾವು ರಥ ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿದ್ದರು. ಉಡುಪಿಯ ಕೋಟೇಶ್ವರದ ಶಿಲ್ಪಗುರು, ರಾಷ್ಟ್ರಪ್ರಶಸ್ತಿ ವಿಜೇತ ಲಕ್ಷ್ಮೀನಾರಾಯಣ ಆಚಾರ್ಯ ನೇತೃತ್ವದ ತಂಡ ಒಂದೂವರೆ ವರ್ಷ ನಿರಂತರವಾಗಿ ಕೆತ್ತನೆ ಕೆಲಸ ಮಾಡಿರುವ ಬ್ರಹ್ಮರಥ ಇಂದು ಕುಕ್ಕೆಗೆ ಹೊರಟಿದೆ. ಕೋಟೆಶ್ವರದಿಂದ ಕುಕ್ಕೆಯವರೆಗೆ ಅಲ್ಲಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆರತಿಯೆತ್ತಿ ಬರಮಾಡಿಕೊಳ್ಳಲಾಗುತ್ತದೆ.

ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ರಥ ಅಕ್ಟೋಬರ್ 2ಕ್ಕೆ ಕುಕ್ಕೆ ಕ್ಷೇತ್ರವನ್ನು ತಲುಪಲಿದೆ. ಬೃಹತ್ ಗಾತ್ರದ ಟ್ರಕ್‍ನಲ್ಲಿ ರಥ ಮತ್ತು ಅದರ ಗಾಲಿಯನ್ನು ಉಡುಪಿಯಿಂದ ಕುಕ್ಕೆಗೆ ಸಾಗಿಸಲಾಯಿತು. ಮುತ್ತಪ್ಪ ರೈ ಪತ್ನಿ ಅನುರಾಧ ಉಡುಪಿಯ ಅಂಬಲಪಾಡಿಯಲ್ಲಿ ಆರತಿಯೆತ್ತಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವರ ಕೃಪೆಯಿಂದ ಕುಕ್ಕೆ ದೇವರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ದೇವರ ಸೇವೆ ಮಾಡುವ ಶಕ್ತಿ ನಮಗೆ ಸಿಗಲಿ ಎಂದು ಬೇಡಿಕೊಂಡಿದ್ದೇವೆ. ಅಲ್ಲಲ್ಲಿ ಜನ ಭಕ್ತಿ ತೋರಿ ಪೂಜೆ ಸಲ್ಲಿಸುತ್ತಿದ್ದಾರೆ. ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬ್ರಹ್ಮರಥ ಸಮರ್ಪಿಸುತ್ತೇವೆ ಎಂದರು. ದಕ್ಷಿಣ ಕನ್ನಡ ಜಿಲ್ಲೆ ಕಡಬದ ಉದ್ಯಮಿ ಅಜಿತ್ ಶೆಟ್ಟಿ ಕೂಡಾ ಬ್ರಹ್ಮ ರಥಕ್ಕೆ ದೇಣಿಗೆ ನೀಡಿದ್ದಾರೆ. ಕೋಟೇಶ್ವರದಿಂದ ಕುಕ್ಕೆಯವರೆಗೆ ತೆರಳುವ ಮೆರವಣಿಗೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ.

ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ಈವರೆಗೆ ಸುಮಾರು 180 ರಥಗಳನ್ನು ಕೆತ್ತಿ ದೇವಸ್ಥಾನಗಳಿಗೆ ಕೊಟ್ಟಿದ್ದಾರೆ. 2006ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದು ಶಿಲ್ಪಗುರು ಎಂಬ ಬಿರುದು ಪಡೆದಿದ್ದರು. 2018ರ ಮಾರ್ಚ್ 15ರಂದು ಬ್ರಹ್ಮರಥದ ಕೆತ್ತನೆ ಕಾರ್ಯ ಆರಂಭ ಮಾಡಲಾಗಿತ್ತು. ಮಹಾಭಾರತ ಮತ್ತು ರಾಮಾಯಣದ ಕೆಲವು ಘಟನೆಗಳನ್ನು ರಥದಲ್ಲಿ ಕೆತ್ತಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *