ಶಾಲಾ ವ್ಯಾನ್ ಹರಿದು 4 ವರ್ಷದ ವಿದ್ಯಾರ್ಥಿ ಸಾವು

Public TV
1 Min Read

ಬೆಂಗಳೂರು: ಶಾಲೆ ಬೇಗ ಮುಗಿತು ಮನೆಗೆ ಹೋಗೋಣ ಎಂದು ಶಾಲೆ ವ್ಯಾನ್ ಏರಿದ 4 ವರ್ಷದ ಬಾಲಕನೋರ್ವ ಡ್ರೈವರ್ ಮಾಡಿದ ಒಂದೇ ಒಂದು ತಪ್ಪಿಗೆ ದಾರುಣವಾಗಿ ಸಾವನಪ್ಪಿದ್ದಾನೆ.

ಬಾಲಕ ದೀಕ್ಷಿತ್(4) ಮೃತ ದುರ್ದೈವಿ. ದೀಕ್ಷಿತ್ ಮನು ಮತ್ತು ಸುನಿತಾ ದಂಪತಿಯ ಒಬ್ಬನೇ ಮಗ. ಕಮ್ಮಸಂದ್ರ ಬಳಿಯ ಸೇಂಟ್ ಪೀಟರ್ ಶಾಲೆಯಲ್ಲಿ ದೀಕ್ಷಿತ್ ಎಲ್‍ಕೆಜಿ ಓದುತ್ತಿದ್ದನು. ಇಂದು ಕೂಡ ಎಂದಿನಂತೆ ಶಾಲೆಗೆ ಹೋಗಿದ್ದ ಬಾಲಕ ಆ ಶಾಲೆಯ ವಾಹನದಲ್ಲಿಯೇ ವಾಪಸ್ ಮನೆಗೆ ಬರಲು ಆತುರದಲ್ಲಿದ್ದನು. ಆದರೆ ಅಷ್ಟೋತ್ತಿಗೆ ಯಮನ ರೂಪದಲ್ಲಿದ್ದ ಆ ಸ್ಕೂಲ್ ವ್ಯಾನ್ ಬಾಲಕನ ಪ್ರಾಣವನ್ನೇ ತೆಗೆದಿದೆ.

ಇಂದು ಸ್ವಲ್ಪ ಬೇಗನೆ ಶಾಲೆ ಮುಗಿದಿದ್ದ ಕಾರಣ ದೀಕ್ಷಿತ್ ಪ್ರತಿದಿನ ಬರುವ ಸ್ಕೂಲ್ ವ್ಯಾನ್‍ನಲ್ಲಿಯೇ ಮನೆ ಬಳಿ ಬಂದಿದ್ದಾನೆ. ಸಾಮಾನ್ಯವಾಗಿ ಸ್ಕೂಲ್ ವ್ಯಾನ್‍ನಲ್ಲಿ ಪುಟ್ಟ ಮಕ್ಕಳನ್ನು ಇಳಿಸೋದಕ್ಕೆ ಮತ್ತು ಹತ್ತಿಸೋದಕ್ಕೆ ಆಯಾಗಳು ಅಥವಾ ಯಾರಾದರು ಸಿಬ್ಬಂದಿ ಇರುತ್ತಾರೆ. ಆದರೆ ಈ ಸ್ಕೂಲ್ ವ್ಯಾನ್‍ನಲ್ಲಿ ಯಾವ ಆಯಾ ಕೂಡ ಇರಲಿಲ್ಲ. ಆದ್ದರಿಂದ ದೀಕ್ಷಿತ್ ಒಬ್ಬನೆ ವ್ಯಾನ್‍ನಿಂದ ಇಳಿದಿದ್ದಾನೆ. ಆತ ಇಳಿಯುತ್ತಿದಂತೆ ಚಾಲಕ ಎಡಗಡೆಯಿಂದ ಬಲಕ್ಕೆ ವಾಹನವನ್ನು ತಿರುಗಿಸೋದಕ್ಕೆ ಅಂತ ಪೂರ್ತಿಯಾಗಿ ಎಡಕ್ಕೆ ಸ್ಟೇರಿಂಗ್ ತಿರುಗಿಸಿದ್ದಾನೆ. ಆಗತಾನೆ ಸ್ಕೂಲ್ ವ್ಯಾನ್‍ನಿಂದ ಇಳಿದು ವ್ಯಾನ್ ಹೋದ ಮೇಲೆ ಹೋಗೋಣ ಅಂತ ಅಲ್ಲಿಯೇ ನಿಂತಿದ್ದ ಬಾಲಕನ ಮೇಲೆ ಏಕಾಏಕಿ ವ್ಯಾನ್ ಹರಿದಿದೆ. ಪರಿಣಾಮ ಪುಟ್ಟ ಬಾಲಕ ಸ್ಥಳದಲ್ಲಿಯೇ ತನ್ನ ಪ್ರಾಣ ಬಿಟ್ಟಿದ್ದಾನೆ.

ಈ ವೇಳೆ ಸ್ಥಳೀಯರು ಬಾಲಕನನ್ನು ಗಮನಿಸಿ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ನಂತರ ಈ ಬಗ್ಗೆ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ವ್ಯಾನ್ ಚಾಲಕನನ್ನು ಹೆಬ್ಬಗೋಡಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

ಇತ್ತ ತಮ್ಮ ಮಗನನ್ನು ಚೆನ್ನಾಗಿ ಓದಿಸಿ ಒಳ್ಳೆಯ ಹುದ್ದೆಗೆ ಕಳಿಸಬೇಕು ಎಂದು ಅಂದುಕೊಂಡಿದ್ದ ಪೋಷಕರು ಇದೀಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಚಾಲಕ ಮಾಡಿದ ತಪ್ಪಿಗೆ ಮುಗ್ಧ ಜೀವ ಬಲಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *