ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

Public TV
2 Min Read

ಬೆಂಗಳೂರು: ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ತೆರೆ ಕಂಡಿದೆ. ಮನಮಿಡಿಯುವ ಸತ್ಯ ಕಥೆಯಾಧಾರಿತ ಚಿತ್ರವೆಂಬ ಕಾರಣದಿಂದ ಮಿಸ್ಸಿಂಗ್ ಬಾಯ್ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಆ ನಂತರದಲ್ಲಿ ನಿರ್ದೇಶಕರು ಪ್ರತಿಯೊಂದು ಹಂತದಲ್ಲಿಯೂ ಈ ಸಿನಿಮಾವನ್ನು ಕುತೂಹಲದ ಉತ್ತುಂಗದಲ್ಲಿಯೇ ಕಾಪಾಡಿಕೊಂಡು ಬಂದಿದ್ದರು. ಬಿಡುಗಡೆಯಾಗೋದು ತಡವಾದರೂ ಪ್ರೇಕ್ಷಕರ ಗಮನ ಅತ್ತಿತ್ತ ಸರಿಯದಂತೆ ನೋಡಿಕೊಂಡಿದ್ದ ಮಿಸ್ಸಿಂಗ್ ಬಾಯ್ ನ ಭಾವುಕ ಕಥೆಯನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ.

ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಮಿಸ್ಸಿಂಗ್ ಬಾಯ್ ಚಿತ್ರ ತೊಂಬತ್ತರ ದಶಕದಲ್ಲಿ ಇದೇ ಕರ್ನಾಟಕದಲ್ಲಿ ನಡೆದಿದ್ದ ಕಥೆಯಾಧಾರಿತ ಚಿತ್ರ. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದಿದ್ದ ಈ ಕಥೆಯನ್ನು ರಘುರಾಮ್ ಕೈಗೆತ್ತಿಕೊಂಡಾಗ ಎಲ್ಲರೂ ಬೆರಗಾಗಿದ್ದದ್ದು ನಿಜ. ಆದರೆ ಇಂಥಾ ಬೆರಗನ್ನು ಸತ್ಯ ಘಟನೆಯೊಂದರ ಸುತ್ತಾ ದೃಶ್ಯ ಕಟ್ಟಿದ ನಂತರವೂ ಜೀವಂತವಾಗಿಡೋದು ಕಷ್ಟ. ನಿರ್ದೇಶಕ ಕಥೆಯ ಪಾತ್ರಗಳನ್ನೇ ಉಸಿರಾಡದಿದ್ದರೆ ಅದು ಖಂಡಿತಾ ಸಾಧ್ಯವಾಗೋದಿಲ್ಲ. ಆದರೆ ರಘುರಾಮ್ ನೈಜ ಘಟನೆಯ ಎಲ್ಲ ಭಾವಗಳನ್ನೂ ಬೊಗಸೆಯಲ್ಲಿ ಹಿಡಿದು ತಾಜಾತನದಿಂದಲೇ ಪ್ರೇಕ್ಷಕರ ಮನಸಿಗೆ ಸೋಕಿಸುವಲ್ಲಿ ಗೆದ್ದಿದ್ದಾರೆ. ಮಿಸ್ಸಿಂಗ್ ಬಾಯ್ ಚಿತ್ರ ಆಪ್ತ ಅನ್ನಿಸೋದು ಈ ಕಾರಣದಿಂದಲೇ.

ಸತ್ಯ ಘಟನೆಗೆ ಬದ್ಧವಾಗಿಯೇ ಹುಬ್ಬಳ್ಳಿಯ ನೆಲದಿಂದಲೇ ಈ ಚಿತ್ರದ ದೃಶ್ಯಾವಳಿಗಳು ಬಿಚ್ಚಿಕೊಳ್ಳುತ್ತವೆ. ಅಲ್ಲಿನ ರೈಲ್ವೇ ನಿಲ್ದಾಣದಲ್ಲಿ ಹೆತ್ತವರ ಕೈ ತಪ್ಪಿಸಿಕೊಂಡು ರೈಲಿನಲ್ಲಿ ಕಾಣೆಯಾಗೋ ಹುಡುಗನ ಆರ್ತಸ್ಥಿತಿಯನ್ನು ಎಲ್ಲರ ಮನಸಿಗೂ ಅಂಟಿಕೊಳ್ಳುವಂಥಾ ಭಾವ ತೀವ್ರತೆಯೊಂದಿಗೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಅದೇ ಬಿಗಿಯಲ್ಲಿಯೇ ಕಥೆ ವಿದೇಶಕ್ಕೂ ಸಂಚರಿಸುತ್ತೆ. ಮಗುವನ್ನು ಕಳೆದುಕೊಂಡ ಹೆತ್ತವರ ಸಂಕಟ ಮತ್ತು ಕರುಳ ಬಂಧದ ಸ್ವಪ್ನ ಬಿದ್ದಂತೆ ದೂರದ ದೇಶದಲ್ಲಿ ತಲ್ಲಣಿಸೋ ನಾಯಕನ ಮಿಡಿತಗಳನ್ನು ಪ್ರೇಕ್ಷಕರು ಅತ್ತಿತ್ತ ಹಂದಾಡಲೂ ಆಸ್ಪದ ಕೊಡದ ರೀತಿಯಲ್ಲಿ ನಿರೂಪಿಸಲಾಗಿದೆ.

ನಾಯಕ ಗುರುನಂದನ್ ಇದೇ ಮೊದಲ ಸಾರಿ ಅವರ ಇಮೇಜಿನಾಚೆಗಿನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಭಾವಪ್ರಧಾನ ಸನ್ನಿವೇಶಗಳಲ್ಲಿಯಂತೂ ನೋಡುಗರು ತಲ್ಲಣಿಸುವಂತೆ ಪರಿಣಾಮಕಾರಿಯಾದ ನಟನೆ ನೀಡಿದ್ದಾರೆ. ಈ ಚಿತ್ರದ ಮೂಲಕವೇ ಗುರುನಂದನ್ ಚಿತ್ರ ಜೀವನದಲ್ಲಿ ಹೊಸ ಅಧ್ಯಾಯವೊಂದು ಶುರುವಾಗೋ ಎಲ್ಲ ಲಕ್ಷಣಗಳೂ ದಟ್ಟವಾಗಿಯೇ ಗೋಚರಿಸಿದೆ. ಇನ್ನುಳಿದಂತೆ ರಂಗಾಯಣ ರಘು ನಟನೆ ಎಂದಿನಂತೆ ಸೊಗಸಾಗಿದೆ. ನಾಯಕನ ತಾಯಿ ಸೇರಿದಂತೆ ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದೆ. ರವಿಶಂಕರ್ ಗೌಡ ಕೂಡಾ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಭಾಗೀರಥಿ ಬಾಯಿ ಕದಂ ನಟನೆ ನಿಜಕ್ಕೂ ಅದ್ಭುತ.

ಒಟ್ಟಾರೆಯಾಗಿ ಮಿಸ್ಸಿಂಗ್ ಬಾಯ್ ಭಿನ್ನ ಪಥದ ಚಿತ್ರ. ತುಂಬಾ ಕಾಲದ ನಂತರ ಮನಮಿಡಿಯುವ ಕಥಾ ಹಂದರದ ವಿಶಿಷ್ಟ ಸಿನಿಮಾ ನೋಡಿದ ಅನುಭವಕ್ಕಾಗಿ ಒಮ್ಮೆ ಮಿಸ್ಸಿಂಗ್ ಬಾಯ್ ಚಿತ್ರವನ್ನು ನೋಡಲೇಬೇಕಿದೆ.

ರೇಟಿಂಗ್: 4/5

Share This Article
Leave a Comment

Leave a Reply

Your email address will not be published. Required fields are marked *