ಆದಿಯೋಗಿ ಪ್ರತಿಮೆ ನೋಡಲು ಬಂದವ ಸ್ನೇಹಿತರ ಕಣ್ಣೆದುರೇ ನೀರಲ್ಲಿ ಮುಳುಗಿ ಸಾವು

Public TV
2 Min Read

ಚಿಕ್ಕಬಳ್ಳಾಪುರ: ತಾಲೂಕಿನ ಆವಲಗುರ್ಕಿ ಬಳಿಯ ಇಶಾ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ನೋಡಲು ಬಂದ ಬಾಲಕನೊಬ್ಬ (Boy) ಕಲ್ಲು ಕ್ವಾರಿ ಬಂಡೆಯ ನೀರಿನೊಳಗೆ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕೌರನಹಳ್ಳಿ ಗ್ರಾಮದ ಬಳಿ ನಡೆದಿದೆ.

ಬೆಂಗಳೂರಿನ ರಾಜಾಜೀನಗರದ ನಿವಾಸಿ ಮನೋಜ್ ಮೃತ ಬಾಲಕ. ಆತ 10 ಮಂದಿ ಸ್ನೇಹಿತರ ತಂಡದೊಂದಿಗೆ ಬುಧವಾರ ಬೆಳಗ್ಗೆ ರೈಲಿನ ಮುಖಾಂತರ ಚಿಕ್ಕಬಳ್ಳಾಪುರಕ್ಕೆ (Chikkaballapur) ಆಗಮಿಸಿದ್ದ. ನಂತರ ಇಶಾ ಫೌಂಡೇಶನ್‌ಗೆ (Isha Foundation) ಭೇಟಿ ನೀಡಿ ಆದಿಯೋಗಿ ಪ್ರತಿಮೆಯ ದರ್ಶನ ಪಡೆದು ಫೋಟೋ ಕ್ಲಿಕ್ಕಿಸಿಕೊಂಡು ವಾಪಸ್ಸಾಗಿದ್ದಾರೆ.

ಈ ವೇಳೆ ಮಾರ್ಗ ಮಧ್ಯೆ ಕೌರನಹಳ್ಳಿ ಬಳಿ ಇರುವ ಕಲ್ಲು ಕ್ವಾರಿಯ ಬಂಡೆಯಲ್ಲಿನ ನೀರು ಕಂಡು ಈಜಾಡಲು ಹೋಗಿದ್ದಾರೆ. ಮೂರು ಮಂದಿ ಸ್ನೇಹಿತರು ಈಜಾಡುತ್ತಿರುವಾಗಲೇ ಆಟವಾಡುತ್ತಾ ಬಾಲಕ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ಇದನ್ನೂ ಓದಿ: ಲವ್ ಫೆಲ್ಯೂರ್- ಯುವತಿ ನೇಣಿಗೆ ಶರಣು

ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಮೃತದೇಹವನ್ನು ಹೊರತೆಗೆದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ರವಾನಿಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಅವಘಡಗಳಿಗೆ ಆಹ್ವಾನ: ಇಶಾ ಆದಿಯೋಗಿ ಪ್ರತಿಮೆ ತಲೆ ಎತ್ತಿದ್ದೇ ಪ್ರತಿದಿನ ಸಹಸ್ರಾರು ಮಂದಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಆದರಲ್ಲೂ ಈಗ ಬೇಸಿಗೆಕಾಲ ಆರಂಭದಲ್ಲೇ ಬಿಸಿಲು ಜೋರಾಗಿದ್ದು ಸಹಜವಾಗಿ ನೀರು ಕಾಣುವ ಜನರು ಈಜಾಡಲು ಮುಂದಾಗುತ್ತಾರೆ. ಬಂಡೆಯ ಆಳ ಆಗಲ ತಿಳಿಯದೆ ಈಜಾಡಲು ಹೋದರೆ ಅಪಾಯ ಕಟ್ಟಿಟ್ಟಿ ಬುತ್ತಿ. ಅದಕ್ಕೆ ಉದಾಹರಣೆ ಎಂಬಂತೆ ಇಂದಿನ ಘಟನೆ ಕೂಡಾ ಸಾಕ್ಷಿಯಾಗಿದೆ.

ಈ ಕಲ್ಲು ಕ್ವಾರಿ ಬಂಡೆ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಈ ಜಾಗದಲ್ಲಿ ಕಡಿದಾದ ತಿರುವು ಕೂಡಾ ಇದೆ. ಇಲ್ಲಿ ವಾಹನಗಳು ಅಪಘಾತಕ್ಕೀಡಾಗುವ ಸಂಭವ ಸಹ ಇದೆ. ಒಂದು ವೇಳೆ ವಾಹನಗಳು ಅಪಘಾತಕ್ಕೀಡಾಗಿ ನೀರಲ್ಲಿ ಬಿದ್ದರೆ ಜೀವ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲಾಡಳಿತ ಕಲ್ಲು ಕ್ವಾರಿಯ ಸುತ್ತ ತಡೆಗೋಡೆ ನಿರ್ಮಾಣ ಮಾಡಬೇಕಿದೆ. ಇಲ್ಲವಾದಲ್ಲಿ ಮುಂದೆಯೂ ಸಹ ಇದೇ ರೀತಿಯ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ – ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಟ

Share This Article
Leave a Comment

Leave a Reply

Your email address will not be published. Required fields are marked *