ಮಾವಿನ ಮರದಲ್ಲಿ ಹಣ್ಣು ಕೀಳೋಕೆ ಹೋದ ಬಾಲಕ ಸಾವು

Public TV
1 Min Read

ಬೆಂಗಳೂರು: ಮಾವಿನ ಮರದಲ್ಲಿ ಹಣ್ಣು ಕೀಳಲು ಹೋದ ಬಾಲಕ ಶವವಾದ ಘಟನೆ ಬೆಂಗಳೂರಿನ ಜೆಬಿ ನಗರದ ಬಸ್ ಸ್ಟಾಪ್ ಬಳಿಯಿರುವ ಪಿಡಬ್ಲ್ಯೂಡಿ ಹಳೆ ಕ್ವಾಟ್ರಸ್ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.

ಭರತ(12) ಹಣ್ಣು ಕೀಳಲು ಹೋಗಿ ಮೃತಪಟ್ಟ ಬಾಲಕ. ಕೈಯಲ್ಲಿ ಕೋಲನ್ನು ಹಿಡಿದು ಮರವನ್ನೇರಿದ ಭರತ ತರಾತುರಿಯಲ್ಲೇ ಹಣ್ಣನ್ನು ಕುಯ್ಯೋಲು ಶುರುಮಾಡಿದ್ದ. ಆದರೆ ಮಾವಿನ ಮರದ ನಡುವಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಬಾಲಕನ ಕಣ್ಣಿಗೆ ಬೀಳದೇ ಹೋಗಿತ್ತು. ಗಡಿಬಿಡಿಯಲ್ಲೇ ಹಣ್ಣು ಕುಯ್ಯೋ ಹೊತ್ತಲ್ಲೇ ಕೈಲಿದ್ದ ಮರದ ಕೋಲು ವಿದ್ಯುತ್ ತಂತಿಯನ್ನು ಸ್ಪರ್ಶಿಸಿತ್ತು. ಅಷ್ಟೇ, ವಿದ್ಯುತ್ ಸ್ವರ್ಶವಾಗುತ್ತಿದ್ದಂತೆ ಕುಸಿದು ಬಿದ್ದ ಭರತ್ ತಂತಿಯ ಮೇಲೆಯೇ ಬದುಕಿನ ಹೋರಾಟ ನಡೆಸಿ ಕೊನೆಗೆ ಸಾವನ್ನಪ್ಪಿದ್ದ.

ಬಾಲಕ ಭರತ ಜೀವನ್ ಭೀಮಾನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಅಯ್ಯಪ್ಪ ಹಾಗೂ ಮರಳಮ್ಮ ದಂಪತಿ ಮೂರನೇ ಮಗನಾಗಿದ್ದ ಭರತ ಆಟ-ಪಾಠದಲ್ಲಿ ಪ್ರವೀಣನಾಗಿದ್ದ. ಮರಳಮ್ಮ ಪತಿಯ ಮರಣದ ನಂತರ ಕಲಬುರಗಿಯಿಂದ ಮೂರು ಮಕ್ಕಳ ಜೊತೆ ಬೆಂಗಳೂರಿಗೆ ಬಂದು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು.

ಈ ಸಾವಿನ ಹಿಂದೆ ಒಂದು ಆರೋಪ ಪೊಲೀಸ್ ಇಲಾಖೆಯ ಹೆಗಲೇರಿದೆ. ಸರಿಯಾದ ಸಮಯದಲ್ಲಿ ಬಾಲಕ ಭರತ್ ನನ್ನು ವಿದ್ಯುತ್ ತಂತಿಯಿಂದ ಬಿಡಿಸಿ ಆಸ್ಪತ್ರೆಗೆ ಕರೆದೊಯ್ದಿದ್ರೆ ಬಾಲಕ ಬದುಕುಳಿಯುತ್ತಿದ್ದನು. ಆದರೆ ಸಹಾಯಕ್ಕೆ ಹೋದ ಸಾರ್ವಜನಿಕರನ್ನು ಕೂಡ ತಡೆದು ಬಾಲಕನ ಸಾವಿಗೆ ಪರೋಕ್ಷವಾಗಿ ಖಾಕಿ ಕಾರಣವಾಯ್ತಾ ಎನ್ನುವ ಪ್ರಶ್ನೆ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *