ಬುಲೆಟ್ ಗಾಯದ ಗುರುತುಗಳೊಂದಿಗೆ ಬಾಕ್ಸರ್ ಮೃತದೇಹ ಪತ್ತೆ

Public TV
1 Min Read

ನೋಯ್ಡಾ: ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಬಾಕ್ಸರ್‍ ವೊಬ್ಬರು ಬುಲೆಟ್ ಗಾಯದ ಗುರುತುಗಳೊಂದಿಗೆ ತನ್ನ ಫ್ಲಾಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಹೇಳಿದ್ದಾರೆ.

ಜಿತೇಂದ್ರ ಮನ್ (27) ಎಂಬವರ ಮೃತ ದೇಹ ನೋಯ್ಡಾದ ಅವರ ಅಪಾರ್ಟ್‍ಮೆಂಟ್ ನಲ್ಲಿ ದೊರೆತಿದೆ. ಜೂನಿಯರ್ ಲೆವೆಲ್ ಬಾಕ್ಸರ್ ಆಗಿದ್ದ ಜಿತೇಂದ್ರ 2006 ರಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. ಹರಿಯಾಣ ರಾಜ್ಯ ಬಾಕ್ಸರ್ ಅಸೋಸಿಯೇಷನ್ ನಲ್ಲಿ ನೋಂದಣಿಯಾಗಿದ್ದರು. ಏಳು ತಿಂಗಳ ಹಿಂದೆ ಗಾಯದ ಸಮಸ್ಯೆಯಿಂದ ಜಿತೇಂದ್ರ ಅವರು ಬಾಕ್ಸಿಂಗ್ ನಿಂದ ದೂರ ಉಳಿದು ಜಿಮ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದ್ರೆ ಕಳೆದ ಎರಡು ದಿನಗಳಿಂದ ಜಿಮ್ ಗೂ ಹೋಗಿರಲಿಲ್ಲ. ಜೊತೆಗೆ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.

ಜಿತೇಂದ್ರ ಅವರ ಕುಟುಂಬ ದೆಹಲಿಯಲ್ಲಿ ವಾಸವಿದ್ದು, ಕಳೆದ ಐದು ದಿನಗಳಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಅನುಮಾನಗೊಂಡು ಆಪಾರ್ಟ್ ಮೆಂಟ್ ಬಳಿ ಬಂದು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಜಿತೇಂದ್ರ ಅವರ ಫ್ಲಾಟ್ ಹೊರಗಡೆಯಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ಬಾಗಿಲು ಒಡೆದು ಒಳಪ್ರವೇಶಿಸಿದ ಸಮಯದಲ್ಲಿ ಜಿತೇಂದ್ರ ರಕ್ತದ ಮಾಡುವಿನಲ್ಲಿ ಬಿದ್ದಿದ್ದನ್ನು ಕುಟುಂಬಸ್ಥರು ನೋಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುನಿತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಅವರ ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ತನಿಖೆಯನ್ನು ಮುಂದುವರೆಸುವುದಾಗಿ ಪೊಲೀಸ್ ಉಪ ಅಧೀಕ್ಷಕ ಅಮೀತ್ ಕಿಶೋರ್ ತಿಳಿಸಿದ್ದಾರೆ. ಘಟನೆಯ ಕುರಿತು ಐಪಿಸಿ ಸೆಕ್ಷನ್ 302(ಕೊಲೆ) ರಡಿ ಸೂರಜ್‍ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *