ಮಾಲ್ಡೀವ್ಸ್‌ನಲ್ಲಿ ಈ ವಯಸ್ಸಿನವರು ಧೂಮಪಾನ ಮಾಡುವಂತಿಲ್ಲ – ಪ್ರವಾಸಿಗರಿಗೂ ಅನ್ವಯಿಸುತ್ತಾ? ಶಿಕ್ಷೆ ಏನು?

Public TV
3 Min Read

ಪ್ರತಿಯೊಂದು ದೇಶವೂ ತನ್ನದೇ ಆದ ರೀತಿಯಲ್ಲಿ ಪ್ರಸಿದ್ಧಿಯಾಗಿದೆ. ಪ್ರಪಂಚದಲ್ಲಿರುವ ಅತ್ಯಂತ ರೊಮ್ಯಾಂಟಿಕ್ ದೇಶಗಳಲ್ಲಿ ಮಾಲ್ಡೀವ್ಸ್‌ ಕೂಡ ಒಂದಾಗಿದೆ. ಹನಿಮೂನ್‌, ಪ್ರವಾಸ ಸೇರಿದಂತೆ ಇನ್ನೂ ಅನೇಕ ಕಾರಣಗಳಿಗಾಗಿ ಜನರು ಈ ದ್ವೀಪ ರಾಷ್ಟ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಮಾಲ್ಡೀವ್ಸ್ ಅಲ್ಲಿನ ಯುವ ಪೀಳಿಗೆಗೆ ಹಾಗೂ ಪ್ರವಾಸಿಗರಿಗೆ ಕೆಲವೊಂದು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದ್ದು, ಜನವರಿ 1,2007ರ ಬಳಿಕ ಹುಟ್ಟಿದವರು ಮಾಲ್ಡೀವ್ಸ್‌ನಲ್ಲಿ ಧೂಮಪಾನ ಮಾಡದಂತೆ ನಿಷೇಧ ಹೇರಿದೆ. ಹಾಗಿದ್ರೆ ಮಾಲ್ಡೀವ್ಸ್‌ನಲ್ಲಿ 2007ರ ಬಳಿಕ ಹುಟ್ಟಿದವರಿಗೆ ಧೂಮಪಾನ ನಿಷೇಧಿಸಿದ್ದೇಕೆ? ನಿಯಮ ಮೀರಿದರೆ ಶಿಕ್ಷೆ ಏನು? ಈ ನಿಯಮ ಪ್ರವಾಸಿಗರಿಗೂ ಅನ್ವಯಿಸುತ್ತಾ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಧೂಮಪಾನ ನಿಷೇಧಿಸಿದ ಮೊದಲ ದೇಶ ಮಾಲ್ಡೀವ್ಸ್:
ಕೆಲವು ದೇಶಗಳು ಕಠಿಣವಾದ ನಿಯಮಗಳನ್ನು ಹೊಂದಿರುತ್ತವೆ. ಅವುಗಳನ್ನು ಪ್ರತಿಯೊಬ್ಬ ಪ್ರವಾಸಿಗ ಹಾಗೂ ನಿವಾಸಿಗರು ಅನುಸರಿಸಲೇಬೇಕು. ಅಂತಹ ದೇಶಗಳಲ್ಲಿ ಮಾಲ್ಡೀವ್ಸ್‌ ಕೂಡ ಒಂದಾಗಿದೆ. ಇಡೀ ಪೀಳಿಗೆಗೆ ಧೂಮಪಾನವನ್ನು ನಿಷೇಧಿಸಿದ ವಿಶ್ವದ ಮೊದಲ ದೇಶ ಎಂಬ ಕೀರ್ತಿಗೆ ಮಾಲ್ಡೀವ್ಸ್‌ ಭಾಜನವಾಗಿದೆ. ಜನರೇಷನ್ Z ಸಿಗರೇಟ್ ಅಥವಾ ಯಾವುದೇ ತಂಬಾಕು ಉತ್ಪನ್ನಗಳು ಇನ್ನು ಮುಂದೆ ಈ ಮುಸ್ಲಿಂ ದೇಶದಲ್ಲಿ ಲಭ್ಯವಿರುವುದಿಲ್ಲ.

ಜನವರಿ 1, 2007 ರಂದು ಅಥವಾ ನಂತರ ಜನಿಸಿದ ನಿವಾಸಿಗಳು ಮತ್ತು ಸಂದರ್ಶಕರು ಧೂಮಪಾನ ಮಾಡುವಂತಿಲ್ಲ ಎಂಬ ವಿಶೇಷ ಕಾನೂನನ್ನು ಮಾಲ್ಡೀವ್ಸ್ ಜಾರಿಗೊಳಿಸಿದೆ.ಈ ನಿಷೇಧವು ಮಾಲ್ಡೀವ್ಸ್‌ಗೆ ಭೇಟಿ ನೀಡುವ ಪ್ರವಾಸಿಗರಿಗೂ ಅನ್ವಯಿಸುತ್ತದೆ. ಈ ವಯಸ್ಸಿನವರು ದೇಶದಲ್ಲಿ ಯಾವುದೇ ತಂಬಾಕು ಉತ್ಪನ್ನಗಳನ್ನು ಖರೀದಿಸಲು ಅಥವಾ ಬಳಸಲು ಅವಕಾಶವಿಲ್ಲ.‌

ಯಾವಾಗ ಜಾರಿಗೆ?
ಈ ವರ್ಷದ ಆರಂಭದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಈ ಕಾನೂನು ಜಾರಿಗೆ ತರುವಲ್ಲಿ ಯೋಜನೆ ರೂಪಿಸಿದ್ದರು. ನವೆಂಬರ್ 1 ಶನಿವಾರದಿಂದ ಧೂಮಪಾನ ನಿಷೇಧ ಜಾರಿಗೆ ಬಂದಿತು. ನಿಷೇಧವನ್ನು ಘೋಷಿಸಿದ ಮಾಲ್ಡೀವ್ಸ್‌ನ ಆರೋಗ್ಯ ಸಚಿವಾಲಯವು, ಹೊಸ ನಿಬಂಧನೆಯಡಿಯಲ್ಲಿ, ಜನವರಿ 1, 2007ರಂದು ಅಥವಾ ನಂತರ ಜನಿಸಿದ ವ್ಯಕ್ತಿಗಳು ಮಾಲ್ಡೀವ್ಸ್‌ನಲ್ಲಿ ತಂಬಾಕು ಉತ್ಪನ್ನಗಳನ್ನು ಖರೀದಿಸುವುದು, ಬಳಸುವುದು ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ನಿಷೇಧವು ಎಲ್ಲಾ ರೀತಿಯ ತಂಬಾಕುಗಳಿಗೆ ಅನ್ವಯಿಸುತ್ತದೆ ಮತ್ತು ಚಿಲ್ಲರೆ ವ್ಯಾಪಾರಿಗಳು ಅವುಗಳನ್ನು ಮಾರಾಟ ಮಾಡುವ ಮೊದಲು ಖರೀದಿದಾರರ ವಯಸ್ಸನ್ನು ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿದೆ.

ಪ್ರವಾಸಿಗರಿಗೂ ಅನ್ವಯ :
ಮಾಲ್ಡೀವ್ಸ್ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಭಾರತೀಯರಲ್ಲಿ ಬಹಳ ಜನಪ್ರಿಯವಾಗಿದೆ. ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ವೇಪಿಂಗ್ ಉತ್ಪನ್ನಗಳ ಆಮದು, ಮಾರಾಟ, ವಿತರಣೆ, ಸ್ವಾಧೀನ ಮತ್ತು ಬಳಕೆಯ ಮೇಲೆ ದೇಶದಲ್ಲಿ ಸಂಪೂರ್ಣ ನಿಷೇಧ ಮುಂದುವರಿಯಲಿದೆ ಎಂದು ಸಚಿವಾಲಯ ತಿಳಿಸಿದೆ. ಈ ನಿಯಮವು ಎಲ್ಲಾ ವಯಸ್ಸಿನ ಜನರಿಗೆ ಸಮಾನವಾಗಿ ಅನ್ವಯಿಸುತ್ತದೆ.

ಶಿಕ್ಷೆ ಏನು?
ಒಂದು ವೇಳೆ ಮಾಲ್ಡೀವ್ಸ್‌ ನಿವಾಸಿಗಳಾಗಲೀ ಅಥವಾ ಪ್ರವಾಸಿಗಳಾಗಲೀ ಈ ನಿಯಮವನ್ನು ಮೀರಿದರೆ ಅಪ್ರಾಪ್ತ ವಯಸ್ಕರಿಗೆ ತಂಬಾಕು ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳು 50,000 ಮಾಲ್ಡೀವಿಯನ್ ರುಪಿಯಾ (ಅಂದಾಜು 2,87,740 ರೂ.) ದಂಡವನ್ನು ಪಾವತಿಸಬೇಕಾಗುತ್ತದೆ. ಇದು ತಂಬಾಕಿನ ಹಾನಿಗಳಿಂದ ಯುವಕರನ್ನು ರಕ್ಷಿಸಲು ತೆಗೆದುಕೊಂಡ ದಿಟ್ಟ ಹೆಜ್ಜೆಯಾಗಿದೆ ಎಂದು ಮಾಲ್ಡೀವಿಯನ್ ಸರ್ಕಾರ ತಿಳಿಸಿದೆ.

ಮಾಲ್ಡೀವ್ಸ್‌ನಲ್ಲಿ ಏನೆಲ್ಲಾ ನಿಷೇಧ?
-ಮಾಲ್ಡೀವ್ಸ್‌ನ ರೆಸಾರ್ಟ್‌ಗಳನ್ನು ಹೊರತುಪಡಿಸಿ ಇನ್ನು ಎಲ್ಲಿಯೂ ಮದ್ಯಪಾನ ಮಾಡುವಂತಿಲ್ಲ.
-ಮದ್ಯವನ್ನು ದೇಶದೊಳಗೆ ತರುವಂತಿಲ್ಲ.
-ರೆಸಾರ್ಟ್‌ಗಳಲ್ಲಿ ಮಾತ್ರ ತುಂಡು ಬಟ್ಟೆಗಳನ್ನು ಧರಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವಂತಿಲ್ಲ.
-ಸಾರ್ವಜನಿಕ ಬೀಚ್‌ಗಳಲ್ಲಿ ಬಿಕಿನಿ ಧರಿಸುವಂತಿಲ್ಲ.
-ಹಂದಿ ಮಾಂಸ, ಪೋರ್ನೋಗ್ರಫಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಧೂಮಪಾನ ನಿಷೇಧ ಮಹತ್ವದ ಹೆಜ್ಜೆ:
ಧೂಮಪಾನದಿಂದಾಗಿ ಪ್ರತಿ ವರ್ಷ ಜಾಗತಿಕವಾಗಿ ಏಳು ಮಿಲಿಯನ್‌ಗಿಂತಲೂ ಹೆಚ್ಚು (70 ಲಕ್ಷ) ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು WHO ದತ್ತಾಂಶಗಳು ತಿಳಿಸಿವೆ. 

WHO ದತ್ತಾಂಶದ ಪ್ರಕಾರ, 2024 ರಲ್ಲಿ, 15 ರಿಂದ 69 ವರ್ಷ ವಯಸ್ಸಿನ ಮಾಲ್ಡೀವಿಯನ್ ಜನಸಂಖ್ಯೆಯಲ್ಲಿ ಸುಮಾರು 25.5% ಜನರು ತಂಬಾಕನ್ನು ಬಳಸುತ್ತಿದ್ದರು. ಈ ಪೈಕಿ ಸುಮಾರು 41.7%ನಷ್ಟು ಪುರುಷರು ಹಾಗೂ 9.3%ನಷ್ಟು ಮಹಿಳೆಯರು ತಂಬಾಕು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.

2021ರ CNN ವರದಿ ಪ್ರಕಾರ, 13 ರಿಂದ 15 ವರ್ಷ ವಯಸ್ಸಿನ ಯುವ ಹದಿಹರೆಯದವರಲ್ಲಿ ತಂಬಾಕು ಬಳಕೆಯ ಪ್ರಮಾಣವು ಬಹುತೇಕ ಎರಡು ಪಟ್ಟು ಹೆಚ್ಚಾಗಿದೆ. ಹೀಗಾಗಿ ಮಾಲ್ಡೀವ್ಸ್‌ನಲ್ಲಿ ಯುವ ಪೀಳಿಗೆಗೆ ಧೂಮಪಾನ ನಿಷೇಧ ಮಹತ್ವದ ಹೆಜ್ಜೆಯಾಗಿದೆ. ಮಾಲ್ಡೀವ್ಸ್‌ನ ಆರೋಗ್ಯ ಸಚಿವಾಲಯವು ಈ ಕ್ರಮವನ್ನು ಐತಿಹಾಸಿಕ ಎಂದು ಕರೆದಿದ್ದು, ನಾಗರಿಕರನ್ನು ರಕ್ಷಿಸುವ ಮತ್ತು ತಂಬಾಕು ಮುಕ್ತ ಪೀಳಿಗೆಯನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದೆ.

Share This Article