ಕೊಳವೆಬಾವಿಗೆ ಬಿದ್ದ 6ರ ಬಾಲಕಿಗಾಗಿ ಮುಂದುವರಿದ ಕಾರ್ಯಾಚರಣೆ- ಅಡ್ಡಿಯಾಗ್ತಿದೆ ಬಂಡೆಗಲ್ಲು

Public TV
2 Min Read

– ಭದ್ರತೆಗೆ ಬಂದಿದೆ ಸೇನೆ

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಜುಂಜರವಾರ ಗ್ರಾಮದಲ್ಲಿ ಕೊಳವೆ ಬಾವಿಯೊಳಗೆ 6 ವರ್ಷದ ಬಾಲಕಿ ಕಾವೇರಿ ಬಿದ್ದ ಪ್ರಕರಣದ ಕಾರ್ಯಾಚರಣೆ ಚುರುಕು ಪಡೆದಿದೆ. 15 ಗಂಟೆಗಳಿಂದಲೂ ಕಾರ್ಯಾಚರಣೆ ನಡೀತಿದೆ. ಕೊಳವೆ ಬಾವಿಗೆ ಆಮ್ಲಜನಕ ಪೂರೈಸಲಾಗುತ್ತಿದ್ದು, ಪುಣೆ ಎನ್‍ಡಿಆರ್‍ಎಫ್ ತಂಡ ಒಂದ್ಕಡೆ ಆ್ಯಂಕರ್ (ಲಂಗರು) ಬಳಸಿಯೂ ಮತ್ತೊಂದು ಕಡೆ ಹಿಟಾಚಿ, ಬಂಡೆ ಒಡೆಯೋ ಯಂತ್ರಗಳಿಂದ ಮಣ್ಣನ್ನು ಅಗೆಯಲಾಗ್ತಿದೆ. ಈಗಾಗಲೇ 13 ಅಡಿ ಅಗೆಯಲಾಗಿದೆ.

ಶನಿವಾರ ಸಂಜೆ 5 ಗಂಟೆ ಆಸುಪಾಸಿನಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕಿ ಕಾವೇರಿಯನ್ನ ಇನ್ನೂ ಮೇಲೆತ್ತಲು ಆಗಿಲ್ಲ. ರಾತ್ರಿಯೆಲ್ಲಾ ನಡೆದ ಕಾರ್ಯಾಚರಣೆ ಇದೀಗ 15 ಗಂಟೆಯೇ ಮುಗಿದಿದೆ. ಆದಾಗ್ಯೂ ಕಾವೇರಿ ಇನ್ನೂ ಮೇಲೆ ಬಂದಿಲ್ಲ. ಸುಮಾರು 30 ಅಡಿ ಆಳದಲ್ಲಿ ಸಿಕ್ಕಿರುವ ಕಾವೇರಿಯ ಚಲನವಲನ ವೀಕ್ಷಿಸಲು 18 ಅಡಿಯವರೆಗೆ ವೆಬ್ ಕ್ಯಾಮೆರಾ ಬಿಡಲಾಗಿತ್ತು. ಆದ್ರೆ ಮಧ್ಯದಲ್ಲಿ ಮಣ್ಣು ಆವರಿಸಿದ ಕಾರಣ ಬಾಲಕಿಯ ಸುಳಿವು ಸಿಕ್ಕಿಲ್ಲ.

ಬಾಲಕಿ ಕಾವೇರಿ ರಕ್ಷಣಾ ಕಾರ್ಯದಲ್ಲಿ 9 ತಂಡಗಳು ಭಾಗಿಯಾಗಿವೆ. ಪುಣೆ, ಹೈದರಾಬಾದ್‍ನ ಎನ್‍ಡಿಆರ್‍ಎಫ್ ತಂಡಗಳು, ಬೆಳಗಾವಿಯ ಮಿಲಿಟರಿ ತುಕಡಿ, ಸಾಂಗ್ಲಿಯ ಹೆಲ್ಪ್‍ಲೈನ್ ಬಸವರಾಜ್ ಹಿರೇಮಠ್, ರಾಯಚೂರಿನ ಹಟ್ಟಿ, ಸ್ಥಳೀಯ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸ್ ಇಲಾಖೆಗಳು ಆಪರೇಷನ್ ಕಾವೇರಿಯಲ್ಲಿ ಭಾಗಿಯಾಗಿವೆ. ಇನ್ನು ಬೆಳಗಾವಿಯ ಡಿಸಿ ಜಯರಾಮ್, ಎಸ್‍ಪಿ ರವಿಕಾಂತೇಗೌಡ, ಅಥಣಿ ತಹಸೀಲ್ದಾರ್ ಉಮಾದೇವಿ ಹಾಗೂ ಅಥಣಿ ಶಾಸಕ ಲಕ್ಷ್ಮಣ್ ಸವಧಿ ರಾತ್ರಿಯೆಲ್ಲಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಗಂಟೆ ಗಂಟೆಗೂ ಎಲ್ಲರೂ ಮಾಹಿತಿ ಕೊಡ್ತಿದ್ರು.

ಸವಿತಾ – ಅಜಿತ್ ದಂಪತಿಗೆ ಅನ್ನಪೂರ್ಣ, ಕಾವೇರಿ ಮತ್ತು ಪವನ್ ಎಂಬ ಮೂವರು ಮಕ್ಕಳಿದ್ದಾರೆ. ಶನಿವಾರ ಸಂಜೆ ಕಟ್ಟಿಗೆ ಆರಿಸಲು ತಾಯಿ ಜೊತೆ ಕಾವೇರಿ ಮತ್ತು ಪವನ್ ತೆರಳಿದ್ದರು. ಈ ವೇಳೆ ಶಂಕರಪ್ಪ ಹಿಪ್ಪರಗಿ ಅವರ ಜಮೀನಿನಲ್ಲಿ ಮೂರು ವರ್ಷಗಳ ಹಿಂದೆ ಕೊರೆದು ಫೇಲ್ ಆದ ಕಾರಣ ಹಾಗೇ ಬಿಟ್ಟಿದ್ದ ಕೊಳವೇ ಬಾವಿಗೆ ಅಚಾನಕ್ ಆಗಿ ಕಾವೇರಿ ಆಯತಪ್ಪಿ ಬಿದ್ದಿದ್ದಾರೆ. ಅಕ್ಕ ಬಾವಿಗೆ ಬಿದ್ದ ಸುದ್ದಿಯನ್ನ ಪವನ್ ತಕ್ಷಣವೇ ತಾಯಿಗೆ ತಿಳಿಸಿದ್ದಾನೆ. ಆತಂಕದಿಂದ ಓಡಿ ಬಂದ ತಾಯಿ ಸವಿತಾಗೆ ಮೊದಲಿಗೆ ಕಾವೇರಿಯ ಅಳಲು ಕೇಳಿಸಿದೆ. ಆಮೇಲೆ ಹಗ್ಗ ಬಿಟ್ಟು ರಕ್ಷಿಸಲು ಯತ್ನಿಸಿದ್ದಾರೆ. ಆದ್ರೆ ಸಾಧ್ಯವಾಗಿಲ್ಲ. ತಕ್ಷಣವೇ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿ ಎಲ್ಲರಿಗೂ ತಿಳಿದಿದೆ. ಕೂಲಿಗೆ ಹೋಗಿದ್ದ ಪತಿ ಅಜಿತ್ ಬರುವಷ್ಟರಲ್ಲಿ ಇಡೀ ಗ್ರಾಮವೇ ಅಲ್ಲಿ ನೆರೆದಿತ್ತು. ಡಿಸಿ, ಎಸ್‍ಪಿ, ಅಗ್ನಿಶಾಮಕ ದಳವೆಲ್ಲಾ ಬಂದಿತ್ತು. ಸವಿತಾ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೆ, ಅನ್ನ-ಆಹಾರ ಸೇವಿಸದೆ ರಾತ್ರಿಯೆಲ್ಲಾ ಗೋಳಾಡಿ ಕಣ್ಣೀರಿಟ್ಟ ಸವಿತಾ ಅಸ್ವಸ್ಥರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *