ವಂಚನೆ ಆರೋಪ ಪ್ರಕರಣದಲ್ಲಿ ನಟ ಧ್ರುವ ಸರ್ಜಾಗೆ (Dhruva Sarja) ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನಟನ ವಿರುದ್ಧ ನ್ಯಾಯಾಲಯದ ಅನುಮತಿಯಿಲ್ಲದೆ ಆರೋಪಪಟ್ಟಿ ಸಲ್ಲಿಸದಂತೆ ಬಾಂಬೆ ಹೈಕೋರ್ಟ್, ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ವಿಭಾಗೀಯ ಪೀಠವು, ನ್ಯಾಯಾಲಯದ ಅನುಮತಿಯಿಲ್ಲದೆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸದಂತೆ ನಿರ್ದೇಶಿಸಿದೆ. ಇದನ್ನೂ ಓದಿ: 3.15 ಕೋಟಿ ವಂಚನೆ ಆರೋಪ; ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್
ನಟನ ವಿರುದ್ಧ ಮುಂಬೈನಲ್ಲಿ ಬಹುಕೋಟಿ ವಂಚನೆ ಪ್ರಕರಣವನ್ನು ಜಗ್ಗುದಾದ ಸಿನಿಮಾದ ನಿರ್ದೇಶಕ ರಾಘವೇಂದ್ರ ಹೆಗಡೆ ದಾಖಲಿಸಿದ್ದರು. ಈ ಸಂಬಂಧ ಮುಂಬೈ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಧ್ರುವ ಸರ್ಜಾಗೆ ನಟಿಸುವುದಕ್ಕಾಗಿ ಮುಂಗಡ ಹಣ ನೀಡಿದ್ದೆ. 3.15 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ, ಸಿನಿಮಾದಲ್ಲಿ ನಟಿಸುವುದಕ್ಕೆ ಸರ್ಜಾ ನಿರಾಕರಿಸಿದ್ದರು. ಮುಂಗಡ ತಗೆದುಕೊಂಡಿರುವ ಹಣವನ್ನು ವಾಪಸ್ಸು ನೀಡುತ್ತಿಲ್ಲ ಎಂದು ಹೆಗಡೆ ದೂರಿನಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ಕೆಜಿಎಫ್ ಖ್ಯಾತಿಯ ಹರೀಶ್ ರಾಯ್ ಸಹಾಯಕ್ಕೆ ನಿಂತ ಧ್ರುವ ಸರ್ಜಾ
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸರ್ಜಾ ಅರ್ಜಿ ಸಲ್ಲಿಸಿದ್ದರು. ನಾನು ಯಾವುದೇ ಚಿತ್ರದಲ್ಲಿ ಕೆಲಸ ಮಾಡುವ ಒಪ್ಪಂದದಿಂದ ಎಂದಿಗೂ ಹಿಂದೆ ಸರಿದಿಲ್ಲ. ಹೆಗಡೆ ಅವರು ಕೆಲಸ ಮಾಡಲು ಯಾವುದೇ ಕಾರ್ಯಸಾಧ್ಯವಾದ ಸ್ಕ್ರಿಪ್ಟ್‌ಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ಸರ್ಜಾ ತಿಳಿಸಿದ್ದರು.