ಮುಂಬೈ, ನಾಗ್ಪುರ ಸೇರಿದಂತೆ ಮಹಾರಾಷ್ಟ್ರದ ಹಲವು ನ್ಯಾಯಲಯಗಳಿಗೆ ಬಾಂಬ್ ಬೆದರಿಕೆ

1 Min Read

ಮುಂಬೈ: ಇಲ್ಲಿನ ಮುಂಬೈ ಮತ್ತು ನಾಗ್ಪುರ ಸೇರಿದಂತೆ ಮಹಾರಾಷ್ಟ್ರದ ಹಲವಾರು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ (Bomb Threat) ಇಮೇಲ್‌ಗಳು ಬಂದಿವೆ. ಈ ಹಿನ್ನೆಲೆ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ನ್ಯಾಯಾಲಯದ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬಾಂಬೆ ಹೈಕೋರ್ಟ್, ಬಾಂದ್ರಾ ಮೆಟ್ರೋಪಾಲಿಟನ್ ಕೋರ್ಟ್, ಅಂಧೇರಿ ಮೆಟ್ರೋಪಾಲಿಟನ್ ಕೋರ್ಟ್ ಮತ್ತು ಫೋರ್ಟ್ ಕೋರ್ಟ್ ಸಂಕೀರ್ಣ ಸೇರಿದಂತೆ ಮುಂಬೈನ ಹಲವಾರು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ. ಕೂಡಲೇ ಮುಂಬೈ ಪೊಲೀಸರು ಬೆದರಿಕೆ ಇಮೇಲ್ ಕಳಿಸಿದ ಇಡಿಯ ಮಾಹಿತಿಯನ್ನು ಪತ್ತೆಹಚ್ಚುತ್ತಿದ್ದಾರೆ.ಇದನ್ನೂ ಓದಿ: KGF ಸಹ-ನಿರ್ದೇಶಕ ಕೀರ್ತನ್ ನಾಡಗೌಡರ 4 ವರ್ಷದ ಮಗು ಲಿಫ್ಟ್‌ ಅಪಘಾತದಲ್ಲಿ ಸಾವು

ಬೆದರಿಕೆ ಬಂದ ಎಲ್ಲಾ ನ್ಯಾಯಾಲಯದ ಆವರಣದಲ್ಲಿ ತೀವ್ರ ಪರಿಶೀಲನೆ ನಡೆಸಲಾಗಿದ್ದು, ಈವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ, ಮಧ್ಯಾಹ್ನ 3 ಗಂಟೆಯವರೆಗೆ ನ್ಯಾಯಾಲಯದ ಕಲಾಪಗಳನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನೂ ಬಾಂಬೆ ಹೈಕೋರ್ಟ್ ಆವರಣದಲ್ಲಿ ಬಾಂಬ್ ಸ್ಕ್ವ್ಯಾಡ್‌ ಸೇರಿದಂತೆ ಶ್ವಾನ ದಳ ಶೋಧ ಕಾರ್ಯ ನಡೆಸಿವೆ.

ನಾಗ್ಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಅಧಿಕೃತ ಇಮೇಲ್ ಐಡಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. “ಐಎಸ್‌ಐ ಮದ್ರಾಸ್ ಟೈಗರ್” ಹೆಸರಿನಲ್ಲಿ ಕಳುಹಿಸಿದ್ದ ಮೇಲ್‌ನಿಂದಾಗಿ ಭಯದ ವಾತಾವರಣ ಉಂಟಾಗಿತ್ತು. ನ್ಯಾಯಾಲಯದ ಅಧಿಕಾರಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಸದ್ಯ ನ್ಯಾಯಾಲಯದ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಪೊಲೀಸ್ ತಂಡಗಳು ಶೋಧ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ದೌಡಾಯಿಸಿವೆ.

ಭದ್ರತಾ ಸಂಸ್ಥೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಆದರೆ ತನಿಖೆ ಮತ್ತು ಶೋಧ ಕಾರ್ಯಾಚರಣೆ ಸಂಪೂರ್ಣವಾಗಿ ಪೂರ್ಣಗೊಳ್ಳುವವರೆಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳು ಜಾರಿಯಲ್ಲಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ:ಟಿಬಿ ಡ್ಯಾಂ ಗೇಟ್‌ ಬದಲಿಸುವ ಕಾರ್ಯ ಆರಂಭ – ಆಳಕ್ಕೆ ಇಳಿದು, ಜೋತಾಡಿ ಗೇಟ್ ತೆರವು

Share This Article