ರಾಜ್ಯಾದ್ಯಂತ ಕೋರ್ಟ್‌ಗಳಿಗೆ ಬಾಂಬ್‌ ಬೆದರಿಕೆ – ಹೆಚ್ಚಿದ ಆತಂಕ, ಪೊಲೀಸರಿಂದ ತೀವ್ರ ಶೋಧ

2 Min Read

ಮಡಿಕೇರಿ/ಹಾಸನ/ಧಾರವಾಡ: ಕೊಡಗು, ಧಾರವಾಡ, ದಾವಣಗೆರೆ, ಹಾಸನ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಿಗೆ ಏಕಕಾಲಕ್ಕೆ ಬಾಂಬ್‌ ಬೆದರಿಕೆ (Bomb Threat) ಬಂದಿದೆ. ಇದರಿಂದ ಸಾರ್ವಜನಿಕರು, ವಕೀಲರು ಹಾಗೂ ಕೋರ್ಟ್‌ ಸಿಬ್ಬಂದಿ ಆತಂಕಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು (Police), ಬಾಂಬ್‌ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ದೌಡಾಯಿಸಿದ್ದು, ತಪಾಸಣೆ ಕೈಗೊಂಡಿದ್ದಾರೆ.

ಮಡಿಕೇರಿ ನ್ಯಾಯಾಲಯ ಸಂಕೀರ್ಣಕ್ಕೆ ಬೆದರಿಕೆ
ಮಡಿಕೇರಿಯಲ್ಲಿ (Madikeri) ಇರುವ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಪೊಲೀಸ್ ಇಲಾಖೆ ಭದ್ರತಾ ಕ್ರಮ ಕೈಗೊಂಡಿದೆ. ಮುನ್ನೆಚ್ಚರಿಕೆಯಾಗಿ ನ್ಯಾಯಾಲಯ ಸಂಕೀರ್ಣಕ್ಕೆ ಪೊಲೀಸ್ ವಿಶೇಷ ಭದ್ರತಾ ಪಡೆ, ಶ್ವಾನ ದಳ ಹಾಗೂ ಬಾಂಬ್‌ ನಿಷ್ಕ್ರೀಯ ದಳಗಳು ಧಾವಿಸಿದ್ದು, ಪರಿಶೀಲನೆ‌ ನಡೆಸುತ್ತಿದೆ. ಪರಿಶೀಲನೆ ವೇಳೆ ನ್ಯಾಯಾಲಯದ ಒಳಗಿದ್ದ ಸಿಬ್ಬಂದಿ, ವಕೀಲರು ಹಾಗೂ ಇತರೆ ಸಿಬ್ಬಂದಿಯನ್ನ ಹೊರಗೆ ಕಳುಹಿಸಲಾಗಿದೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನ್ಯಾಯಾಲಯ ಸಂಕೀರ್ಣದ ಪ್ರತಿಯೊಂದು‌ ಭಾಗವನ್ನೂ ಸೂಕ್ಷ್ಮವಾಗಿ ತಪಾಸಣೆ ನಡೆಸುತ್ತಿರುವ ಪೊಲೀಸರು ಅನುಮಾನಾಸ್ಪದ ವಸ್ತುಗಳ ಶೋಧ ನಡೆಸುತ್ತಿದ್ದಾರೆ. ಅಲ್ಲದೇ ಬೆದರಿಕೆ ಬಂದ ಇ-ಮೇಲ್ ಮೂಲ ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.

ಧಾರವಾಡ ಹೈಕೋರ್ಟ್‌ಗೆ ಬೆದರಿಕೆ
ಇದೇ ವೇಳೆ ಧಾರವಾಡ ಹೈಕೋರ್ಟ್‌ (Dharwad Highcourt) ಹಾಗೂ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಕೂಡಲೇ ಕೋರ್ಟ್‌ ಸಿಬ್ಬಂದಿ ಹಾಗೂ ವಕೀಲಯರನ್ನ ಹೊರಗೆ ಕಳುಹಿಸಿದ್ದು, ಬಳಿಕ ಧಾರವಾಡ ಗರಗ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೋರ್ಟ್‌ ಆವರಣಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಎಸ್ಪಿ ಗುಂಜನ್ ಆರ್ಯ ನೇತೃತ್ವದಲ್ಲಿ ಶೋಧ ನಡೆಸಿದ್ದಾರೆ. ಇದರೊಂದಿಗೆ ಡಿಜಿಟಲ್‌ ತಪಾಸಣೆ ಮಾಡುವಂತೆ ಧಾರವಾಡ ಹೈಕೋರ್ಟ್ ವಕೀಲರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ದಾವಣಗೆರೆ ಜಿಲ್ಲಾ ಕೋರ್ಟ್‌ಗೆ ಬಾಂಬ್ ಬೆದರಿಕೆ.
ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೂ ಅಪರಿಚಿತ ಇ-ಮೇಲ್‌ ವಿಳಾಸದಿಂದ ಬಾಂಬ್‌ ಬೆದರಿಕೆ ಬಂದಿದೆ. ʻಇಂದು ಮಧ್ಯಾಹ್ನ 12:30ರ ಹೊತ್ತಿಗೆ ಆರ್‌ಡಿಎಕ್ಸ್ ಸ್ಫೋಟವಾಗಲಿದೆʼ ಎಂಬ ಸಂದೇಶ ಬಂದಿದೆ. ಈ ಹಿನ್ನೆಲೆ ಕೂಡಲೇ ಕಲಾಪಗಳನ್ನ ಸ್ಥಗಿತಗೊಳಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಕೂಡಲೇ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಇ-ಮೇಲ್‌ ವಿಳಾಸ ತಮಿಳುನಾಡಿನಲ್ಲಿ ಪತ್ತೆಯಾಗಿದೆ. ಸದ್ಯ ಕೋರ್ಟ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹಾಸನ ಜಿಲ್ಲಾ ನ್ಯಾಯಾಲಯಕ್ಕೆ ಬೆದರಿಕೆ ಸಂದೇಶ
ಇಲ್ಲಿನ ಜಿಜಿಲ್ಲಾ ನಾಯಾಲಯಕ್ಕೆ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿದ್ದು, ಹಾಸನ ನಗರ ಠಾಣೆ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ. ಕೋರ್ಟ್‌ ಸಿಬ್ಬಂದಿ, ವಕೀಲರನ್ನ ಆವರಣದಿಂದ ಹೊರಗೆ ಕಳಿಸಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪಾರ್ಕಿಂಗ್, ಕೋರ್ಟ್ ಆವರಣ, ಒಳಾಂಗಣಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ತಪಾಸಣೆ ನಡೆಸುತ್ತಿವೆ.

Share This Article