ಕೃಷ್ಣ ಜನ್ಮಭೂಮಿ ಬೆಂಬಲಿಗರಿಗೆ ಬಾಂಬ್ ದಾಳಿ ಬೆದರಿಕೆ

Public TV
1 Min Read

ಲಕ್ನೋ: ಉತ್ತರಪ್ರದೇಶದ ಫತೇಪುರ್‌ನಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ ಅಧ್ಯಕ್ಷರಿಗೆ ಬಾಂಬ್ ಬೆದರಿಕೆಯೊಂದು ಬಂದಿದೆ. ವಾಟ್ಸಾಪ್ ಕರೆ ಮಾಡಿದ ವ್ಯಕ್ತಿ ತನ್ನನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಎಂದು ಹೇಳಿಕೊಂಡಿದ್ದಾನೆ.

ಶಕುಂಭರಿ ಪೀಠಾಧೀಶ್ವರದ ಅಶುತೋಷ್ ಪಾಂಡೆ ಅವರು ಮಥುರಾದ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಇರುವ ಶ್ರೀ ಕೃಷ್ಣ ಜನ್ಮಭೂಮಿ ವರ್ಸಸ್ ಶಾಹಿ ಮಸೀದಿ ಈದ್ಗಾದಲ್ಲಿ ಸಲ್ಲಿಸಲಾದ ಮೊಕದ್ದಮೆಗೆ ಪ್ರಮುಖ ಕಕ್ಷಿದಾರರಾಗಿದ್ದಾರೆ. ಶುಕ್ರವಾರ ಪ್ರಕರಣದ ವಿಚಾರಣೆಗಾಗಿ ಅವರು ಹೈಕೋರ್ಟ್‌ಗೆ ತೆರಳಿದ್ದರು. ಅಲ್ಲಿಂದ ಸಂಜೆ ಮಥುರಾಗೆ ಹೋಗುತ್ತಿದ್ದಾಗ 8 ಗಂಟೆ ಸುಮಾರಿಗೆ ಅವರ ಮೊಬೈಲ್‌ಗೆ ವಾಟ್ಸಾಪ್ ಕರೆ ಬಂದಿದೆ.

ಅನಾಮಧೇಯ ನಂಬರಿನಿಂದ ಕರೆ ಬಂದಿದ್ದು ಸ್ವೀಕರಿಸಿದಾಗ, ಪ್ರಕರಣ ಹಿಂಪಡೆಯದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಜೊತೆಗೆ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾನೆ. ಈ ಸಂಬಂಧ ಅಶುತೋಷ್‌ ಅವರು ಸದರ್ ಕೊತ್ವಾಲಿಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಎಸ್‌ಐ ಸಂತೋಷ್‌ಕುಮಾರ್‌ ತಿಳಿಸಿದ್ದಾರೆ. ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ನಂಬರ್ ಎಲ್ಲಿಗೆ ಸೇರಿದೆ ಎಂಬುದು ಸ್ಪಷ್ಟವಾಗುತ್ತದೆ.

ಏನಿದು ಪ್ರಕರಣ?: 13.37 ಎಕರೆ ಜಮೀನಿನ ಪೂರ್ಣ ಮಾಲೀಕತ್ವವು ಹಿಂದೂಗಳಿಗೆ ಸೇರಿದ್ದು ಎಂದು ಮಥುರಾ ನ್ಯಾಯಾಲಯದಲ್ಲಿ ಹಿಂದೂ ಸಂಘಟನೆ ವಾದಿಸಿತ್ತು. ಮೊಘಲ್ ದೊರೆ ಔರಂಗಜೇಬನ ಆದೇಶದಂತೆ  ಕೇಶವ ದೇವ ದೇಗುಲವನ್ನು ನಾಶಪಡಿಸಿ, ಅದೇ ಜಾಗದಲ್ಲಿ ಶತಮಾನಗಳಷ್ಟು ಹಳೆಯದಾದ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸಂಘಟನೆ ಆರೋಪಿಸಿರುವ ಹಿಂದೂ ಸಂಘಟನೆ, ಮಸೀದಿಯ ಕೆಲವು ಗೋಡೆಗಳ ಮೇಲೆ ಕಮಲದ ಕೆತ್ತನೆಗಳಿವೆ. ಜೊತೆಗೆ ಶೇಷನಾಗವನ್ನು ಹೋಲುವ ಆಕೃತಿಗಳಿರುವುದು ದೇಗುಲದ ಮೇಲೆ ಮಸೀದಿ ನಿರ್ಮಿಸಿರುವುದಕ್ಕೆ ಪುರಾವೆಗಳು ಎಂದು ಹೇಳಿತ್ತು.

Share This Article