‘ಬಾಯ್ಸ್ ಲಾಕರ್ ರೂಂ’ಗೆ ಟ್ವಿಸ್ಟ್ – ‘ಸಿದ್ಧಾರ್ಥ್’ ಹೆಸರಲ್ಲಿ ಮೊದಲು ಗ್ಯಾಂಗ್‍ರೇಪ್ ಚಾಟ್ ಆರಂಭಿಸಿದ್ದು ವಿದ್ಯಾರ್ಥಿನಿ

Public TV
2 Min Read

– ಸಿದ್ಧಾರ್ಥ್  ಹೆಸರಲ್ಲಿ ಖಾತೆ ತೆರೆದ ವಿದ್ಯಾರ್ಥಿನಿ
– ತನಿಖೆ ವೇಳೆ ಬೆಳಕಿಗೆ ಬಂತು ಸ್ಫೋಟಕ ವಿಚಾರ

ನವದೆಹಲಿ: ದೇಶದಲ್ಲಿ ಬಿರುಗಾಳಿ ಎಬ್ಬಿಸಿದ ‘ಬಾಯ್ಸ್ ಲಾಕರ್ ರೂಂ’ ಪ್ರಕರಣದ ತನಿಖೆ ವೇಳೆ ವಿದ್ಯಾರ್ಥಿಯ ಹೆಸರಿನಲ್ಲಿ ವಿದ್ಯಾರ್ಥಿನಿ ಖಾತೆ ತೆರೆದು ಚಾಟ್ ನಡೆಸಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. ವಿದ್ಯಾರ್ಥಿಗಳು ತರಗತಿ ವಿದ್ಯಾರ್ಥಿನಿಯರ ಸಾಮೂಹಿಕ ಅತ್ಯಾಚಾರ ನಡೆಸುವ ಬಗ್ಗೆ ಚರ್ಚೆ ನಡೆಸಿದ ಬಾಯ್ಸ್ ಲಾಕರ್ ಗ್ರೂಪ್ ಬಗ್ಗೆ ದೇಶದೆಲ್ಲಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ತನಿಖೆ ವೇಳೆ ‘ಸಿದ್ಧಾರ್ಥ್’ ಹೆಸರಿನಲ್ಲಿ ವಿದ್ಯಾರ್ಥಿನಿ ಚಾಟ್ ನಡೆಸಿದ ವಿಚಾರ ಬಹಿರಂಗವಾಗಿದೆ.

ವಿದ್ಯಾರ್ಥಿನಿ ತನ್ನ ಸ್ನೇಹಿತ ಹೇಗಿದ್ದಾನೆ ಎಂದು ತಿಳಿಯಲು ‘ಸಿದ್ಧಾರ್ಥ್’ ಹೆಸರಿನಲ್ಲಿ ಸ್ನಾಪ್ ಚಾಟ್ ನಲ್ಲಿ ಖಾತೆ ತೆರೆದಿದ್ದಾಳೆ. ಈ ಖಾತೆಯ ಮೂಲಕ ಗ್ಯಾಂಗ್ ರೇಪ್ ನಡೆಸುವ ಬಗ್ಗೆ ತರಗತಿಯ ಸ್ನೇಹಿತನ ಜೊತೆ ಚರ್ಚೆ ನಡೆಸಿದ್ದಾಳೆ. ಈ ಮೂಲಕ ಆತನ ನಡತೆಯನ್ನು ಪರೀಕ್ಷಿಸಲು ಮುಂದಾಗಿದ್ದಾಳೆ.

ಪೊಲೀಸರು ವಿದ್ಯಾರ್ಥಿನಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ನಾನು ತರಗತಿ ವಿದ್ಯಾರ್ಥಿ ಗುಣ ಹೇಗಿದೆ? ಅವನ ಪ್ರತಿಕ್ರಿಯೆ ಏನಿರಬಹುದು ಎಂದು ತಿಳಿಯಲು ಸಿದ್ಧಾರ್ಥ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಚಾಟ್ ನಡೆಸಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾಳೆ.

ಈ ಚಾಟ್ ವೇಳೆ ವಿದ್ಯಾರ್ಥಿ ನಾನು ಈ ರೀತಿಯ ಗ್ಯಾಂಗ್ ರೇಪ್ ಕೃತ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಜೊತೆ ಚಾಟ್ ಮಾಡುವುದನ್ನು ನಿಲ್ಲಿಸಿದ್ದಾನೆ.

ಚಾಟ್ ನಲ್ಲಿ ನಡೆದ ಸಂಭಾಷಣೆಯನ್ನು ವಿದ್ಯಾರ್ಥಿ ಸ್ನೇಹಿತರು ಇರುವ ಗ್ರೂಪಿಗೆ ಹಂಚಿಕೊಂಡಿದ್ದಾನೆ. ಈ ವೇಳೆ ವಿದ್ಯಾರ್ಥಿ ಹೆಸರಿನಲ್ಲಿದ್ದ ವಿದ್ಯಾರ್ಥಿನಿಗೂ ಕಳುಹಿಸಿದ್ದಾನೆ. ಇದಾದ ಬಳಿಕ ಈ ಗ್ರೂಪಿನಲ್ಲಿದ್ದ ಸ್ನೇಹಿತನೊಬ್ಬ ಸ್ನಾಪ್ ಚಾಟ್ ಸ್ಕ್ರೀನ್ ಶಾಟ್ ಅನ್ನು ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಕಟಿಸುವ ಮೂಲಕ ಎಲ್ಲ ವಿಚಾರಗಳು ಮಿಶ್ರಣಗೊಂಡ ಪರಿಣಾಮ ವೈರಲ್ ಆಗಿ, ಹಾಟ್ ಟಾಪಿಕ್ ಆಯ್ತು ಎಂದು ದೆಹಲಿಯ ಸೈಬರ್ ಸೆಲ್ ಡಿಸಿಪಿ ಅನ್ವೇಶ್ ರಾಯ್ ತಿಳಿಸಿದ್ದಾರೆ.

ಬಾಯ್ಸ್ ರೂಂ ಪ್ರಕರಣ ಬೆಳಕಿಗೆ ಬಂದ ನಂತರ ತನ್ನ ಸ್ಕ್ರೀನ್ ಶಾಟ್ ವೈರಲ್ ಆದ ವಿಚಾರ ವಿದ್ಯಾರ್ಥಿನಿಗೆ ತಿಳಿದಿದೆ. ಆದರೆ ಆಕೆ ಈ ವಿಚಾರದ ಬಗ್ಗೆ ಎಲ್ಲೂ ತಿಳಿಸಿರಲಿಲ್ಲ.

ಆರಂಭದಲ್ಲಿ ಈ ಸ್ನಾಪ್ ಚಾಟ್ ನಲ್ಲಿ ನಕಲಿ ಖಾತೆ ತೆರೆದು ಚಾಟ್ ನಡೆಸಿದ ಬಗ್ಗೆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ಖಾತೆ ತೆರೆಯುವುದು ತಪ್ಪು. ಆದರೆ ಆಕೆಯ ಉದ್ದೇಶ ಸ್ನೇಹಿತನನ್ನು ಪರೀಕ್ಷೆ ಮಾಡುವುದು ಆಗಿದ್ದರಿಂದ ಪ್ರಕರಣ ದಾಖಲಿಸುವುದಿಲ್ಲ ಎಂದು ಅನ್ವೇಶ್ ರಾಯ್ ಹೇಳಿದ್ದಾರೆ.

ಆರಂಭದಲ್ಲಿ ಬಾಯ್ಸ್ ಲಾಕರ್ ಗ್ರೂಪಿನಲ್ಲಿ 27 ಮಂದಿಯೂ ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ ತನಿಖೆ ವೇಳೆ 27 ವಿದ್ಯಾರ್ಥಿಗಳ ಪೈಕಿ ಯಾರೊಬ್ಬರು ಸ್ನಾಪ್ ಚಾಟ್ ನಲ್ಲಿ ಭಾಗವಹಿಸದಿರುವ ವಿಚಾರ ಬೆಳಕಿಗೆ ಬಂದಿದೆ.

ಪೊಲೀಸರು ಈಗಾಗಲೇ ಬಾಯ್ಸ್ ಲಾಕರ್ ರೂಂ ಗ್ರೂಪಿನ ಇನ್ ಸ್ಟಾಗ್ರಾಮ್ ಅಡ್ಮಿನ್ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತ ವಿದ್ಯಾರ್ಥಿಯಾಗಿದ್ದು ಒಟ್ಟು 27 ಮಂದಿಯಲ್ಲಿ 24 ಮಂದಿಯನ್ನು ತನಿಖೆ ಒಳಪಡಿಸಲಾಗಿದೆ. ಇಬ್ಬರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಒಬ್ಬನ ವಿಚಾರಣೆ ಬಾಕಿಯಿದೆ. ವಿದ್ಯಾರ್ಥಿಗಳೆಲ್ಲರೂ ದೆಹಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *