ಈಗ 2.46 ಲಕ್ಷ ಕಾರ್ಮಿಕರ ಕಾರ್ಡ್‌ ಅಮಾನತು – ಯಾವ ಜಿಲ್ಲೆಯಲ್ಲಿ ಎಷ್ಟು?

Public TV
2 Min Read

– ಹಾವೇರಿಯಲ್ಲಿ ಅತಿ ಹೆಚ್ಚು 1.69 ಲಕ್ಷ ನಕಲಿ ಕಾರ್ಡ್‌

ಬೆಂಗಳೂರು: ಬಿಪಿಎಲ್, ಎಪಿಎಲ್ ಕಾರ್ಡ್ (APL Card) ಬೆನ್ನಲ್ಲೇ ಸರ್ಕಾರ  ಈಗ ಕಾರ್ಮಿಕರ ಕಾರ್ಡ್‌ಗಳನ್ನು (Labour Card) ಅಮಾನತು ಮಾಡಲು ಮುಂದಾಗಿದೆ. ಸರ್ಕಾರ ಈಗ 2.46 ಲಕ್ಷ ಕಾರ್ಮಿಕರ ಕಾರ್ಡ್‌ಗಳನ್ನು ಅಮಾನತು ಮಾಡಿದೆ.

ಕಟ್ಟಡ ಮತ್ತುಇತರೇ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಬರೋಬ್ಬರಿ 38.42 ಲಕ್ಷ ಕಾರ್ಮಿಕರು ನೋಂದಣಿ ಮಾಡಿದ್ದಾರೆ. ಈ ಪೈಕಿ 2,46,951 ಕಾರ್ಡನ್ನು ನಕಲಿ ಎಂದು ಲಿಸ್ಟ್ ಮಾಡಿದ ಕಾರ್ಮಿಕ ಇಲಾಖೆ ಅಮಾನತು ಮಾಡಲು ಆದೇಶಿಸಿದೆ.

ನಕಲಿ ಕಾರ್ಡ್ ಗಳನ್ನು ಮಾಡಿಸಿ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ನಕಲಿ ಕಾರ್ಡ್‌ಗಳ (Fake Card) ಪತ್ತೆಗೆ ಮುಂದಾಗಿತ್ತು. ಈ ಪೈಕಿ ಹಾವೇರಿ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು 1,69,180 ಕಾರ್ಡ್‌ಗಳನ್ನು ಅಮಾನತು ಮಾಡಿದೆ. ನಕಲಿ ಕಾರ್ಮಿಕರ ಕಾರ್ಡ್‌ಗಳನ್ನು ಅಮಾನತು ಮಾಡಿದ್ದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಉಳಿತಾಯವಾಗಲಿದೆ.

ಕಾರ್ಮಿಕರ ಕಾರ್ಡ್‌ನಿಂದ ವಯೋ ನಿವೃತ್ತಿ ಪಿಂಚಣಿ, ಅಂಗವಿಕಲ ಪಿಂಚಣಿ, ಟೂಲ್ ಕಿಟ್, ವಸತಿ ಸೌಲಭ್ಯ, ಹೆರಿಗೆ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ ಸೌಲಭ್ಯ, ಅಪಘಾತ ಪರಿಹಾರ, ಮದುವೆ ಸಹಾಯಧನ, ಅಂತ್ಯಕ್ರಿಯೆ ಸೇರಿ 15ಕ್ಕೂ ಹೆಚ್ಚು ಸೌಲಭ್ಯಗಳಿಗೆ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆರ್ಥಿಕ ನೆರವು ನೀಡುತ್ತದೆ. ಇದನ್ನೂ ಓದಿ: ಆಹಾರ ಸುರಕ್ಷತಾ ಇಲಾಖೆಯಿಂದ ರಾಜ್ಯದ 127 ಪಿಜಿಗಳಿಗೆ ನೋಟಿಸ್ – 4 ಪಿಜಿಗಳಿಗೆ ದಂಡ

ಕಾರ್ಮಿಕ ಕಾರ್ಡ್ ಪಡೆಯಲು ಮಾನದಂಡಗಳೇನು?
– ನಿರ್ಮಾಣಕ್ಕೆ ಸಂಬಂಧಿಸಿದ ವೃತ್ತಿಯಲ್ಲಿರಬೇಕು
– ಪ್ಲಂಬರ್,ಪೇಂಟಿಂಗ್, ರಸ್ತೆ ನಿರ್ಮಾಣ, ಇಟ್ಟಿಗೆ ನಿರ್ಮಾಣ ಸೇರಿ 56 ವೃತ್ತಿ ಮಾಡುವವರು ಈ ಕಾರ್ಡ್ ಪಡೆಯಲು ಅರ್ಹರು
– ನಿರ್ಮಾಣಕ್ಕೆ ಸಂಬಂಧಪಟ್ಟಂತೆ 90 ದಿನ ಕೆಲಸ ಮಾಡಿದ್ದರೆ ಅಂತವರು ಕಾರ್ಮಿಕರ ಕಾರ್ಡ್ ಪಡೆಯಲು ಅರ್ಹರು

– ಕಾರ್ಮಿಕ ಇಲಾಖೆಯಲ್ಲಿ 14 ಯೋಜನೆಗಳ ಲಾಭವನ್ನ ಕಾರ್ಡ್ ಹೊಂದಿದವರು ಪಡೆಯಬಹುದು
– ಪ್ರತಿ ವರ್ಷ 1,800 ಕೋಟಿ ರೂ. ಹಣವನ್ನು, ಈ ಯೋಜನೆಗಳಿಗೆ ಮೀಸಲಿಡುವ ಇಲಾಖೆ
– 1800 ರೂ. ಕೋಟಿ ಪೈಕಿ 1209 ಕೋಟಿ ರೂ ಹಣ ಫಲಾನುಭವಿಗಳಿಗೆ ಹೋಗ್ತಿತ್ತು
– ತೆರಿಗೆ ಹಣ ಸಂಗ್ರಹಿಸಿ, ಈ ಯೋಜನೆಗಳಿಗೆ ಈ ಹಣ ಮೀಸಲಿಡ್ತಿದ್ದ ಇಲಾಖೆ

Share This Article