ಚಿಕ್ಕಮಗಳೂರು: ಕಡೂರು (Kaduru) ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಹೆಂಡತಿಯನ್ನು (Wife) ಕೊಂದು ಕೊಳವೆ ಬಾವಿಗೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ಮಹಿಳೆಯ ಮೃತದೇಹವನ್ನು ಹೊರತೆಗೆದಿದ್ದಾರೆ.
ಆರೋಪಿ ವಿಜಯ್ ಕಳೆದ ಒಂದೂವರೆ ತಿಂಗಳ ಹಿಂದೆ ತನ್ನ ಪತ್ನಿ ಭಾರತಿಯನ್ನು (28) ಕೊಂದು ಯಾರಿಗೂ ತಿಳಿಯಂತೆ ತಮ್ಮದೇ ತೋಟದಲ್ಲಿ ನೀರು ಬಂದಿದ್ದ ಕೊಳವೆ ಬಾವಿಯಲ್ಲಿ ಹೂತಿದ್ದ. ಬಳಿಕ ಬಾವಿಯೊಳಗೆ ಗೋಣಿಚೀಲ, ಮರಳು ಹಾಕಿ ಮುಚ್ಚಿದ್ದ. ಯಾರಿಗೂ ಅನುಮಾನ ಬಾರದಿರಲಿ ಎಂದು ಆತನೇ ಹೋಗಿ ನನ್ನ ಪತ್ನಿ ಮಾನಸಿಕ ಅಸ್ವಸ್ಥೆ, ಎಲ್ಲೋ ಹೋಗಿದ್ದಾಳೆ ಹುಡುಕಿಕೊಡಿ ಎಂದು ಕಡೂರು ಠಾಣೆಯಲ್ಲಿ ದೂರು ಕೂಡ ನೀಡಿದ್ದ. ಒಂದೂವರೆ ತಿಂಗಳಿಂದ ಪೊಲೀಸರು ಪ್ರಕರಣದ ಹಿಂದೆ ಬಿದ್ದಿದ್ದರು. ಪೊಲೀಸರ ಸೂಕ್ಷ್ಮ ತನಿಖೆಯಿಂದ ಹಂತಕ ಆಕೆಯ ಗಂಡನೇ ಎಂದು ತಿಳಿದು ಬಂದಿತ್ತು. ಬಳಿಕ ಪೊಲೀಸರು ಮೃತಳ ಅತ್ತೆ-ಮಾವ ಗಂಡನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದನ್ನೂ ಓದಿ: ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!
ವಿಚಾರಣೆ ವೇಳೆ ಆರೋಪಿ, ಹೆಂಡತಿ ಹೆಸರು ಬರೆದು ಆಕೆ ದೆವ್ವ-ಪೀಡೆ-ಪಿಶಾಚಿ ಆಗಬಾರದು, ಈ ಕೇಸ್ ಗೊತ್ತಾಗಬಾರದು, ಕೇಸ್ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲವಾಗಬೇಕು. ಕೋರ್ಟಿನಲ್ಲಿ ಕೇಸ್ ನಿಲ್ಲಬಾರದು ಎಂದು ದೇವರಿಗೆ ಮೂರು ಪ್ರಾಣಿ ಬಲಿ ನೀಡಿ, ಕಬ್ಬಿಣದ ತಗಡಿನಲ್ಲಿ ಬರೆದು ಹೆಂಡತಿ ಫೋಟೋ ಇರಿಸಿ ದೇವಾಲಯದ ಮರಕ್ಕೆ ಮೊಳೆ ಹೊಡೆದಿದ್ದ ಎಂದು ತಿಳಿದು ಬಂದಿದೆ.
ತಹಶಿಲ್ದಾರ್, ಡಿವೈಎಸ್ಪಿ, ಪಿಎಸ್‌ಐ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಮೃತದೇಹ ಹೊರತೆಗೆಯಲಾಗಿದೆ. ಕೊಳವೆ ಬಾವಿಯ 12 ಅಡಿ ಆಳದಲ್ಲಿ ಭಾರತೀಯ ಮೃತದೇಹ ಪತ್ತೆಯಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮೃತದೇಹದಲ್ಲಿ ತನಿಖೆಗೆ ಬೇಕಾದ ಅಂಗಾಂಗಳನ್ನ ತೆಗೆದುಕೊಂಡು ಮೃತದೇಹವನ್ನು ಪೋಷಕರಿಗೆ ನೀಡಿದ್ದಾರೆ.
ವಿಜಯ್ ಹಾಗೂ ಭಾರತೀಗೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ 6 ವರ್ಷರ ಒಂದು ಮಗು ಕೂಡ ಇದೆ. ಹೊಲ-ಗದ್ದೆ-ತೋಟ ಎಲ್ಲಾ ಇದ್ದು ಆರ್ಥಿಕವಾಗಿ ಚೆನ್ನಾಗಿದ್ದ ವಿಜಯ್‌ಗೆ ಭಾರತಿ ಕುಟುಂಬಸ್ಥರು ಮದುವೆ ವೇಳೆ ಕಾರು, ಬೈಕ್, ಉಂಗುರ, ಬ್ರಾಸ್ಲೈಟ್, ಚೈನ್ ಎಲ್ಲವನ್ನೂ ನೀಡಿ 15-20 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದರು. ವರದಕ್ಷಿಣೆ (Dowry) ವಿಚಾರವಾಗಿ ಹಲವು ಬಾರಿ ಪತ್ನಿ ಮೇಲೆ ಹಲ್ಲೆ ಮಾಡಿ ಆರೋಪಿ ತವರಿಗೆ ಕಳಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಸಂಸಾರದಲ್ಲಿ ಕಲಹ – ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ