7ರ ಬಾಲಕನನ್ನು ಕೊಂದು 1 ತಿಂಗ್ಳು ಸೂಟ್‍ಕೇಸ್ ನಲ್ಲಿಟ್ಟು ಕೊಠಡಿಯಲ್ಲೇ ಕಾಲ ಕಳೆದ ಐಎಎಸ್ ಆಕಾಂಕ್ಷಿ!

Public TV
2 Min Read

ನವದೆಹಲಿ: ಐಎಎಸ್ ಆಕಾಂಕ್ಷಿಯೊಬ್ಬ 7 ವರ್ಷದ ಬಾಲಕನನ್ನು ಕೊಂದು ಒಂದು ತಿಂಗಳಿಗಿಂತಲೂ ಅಧಿಕ ಕಾಲ ಮನೆಯ ಸೂಟ್ ಕೇಸ್ ನಲ್ಲಿ ಹುದುಗಿಸಿಟ್ಟ ಆಘಾತಕಾರಿ ಘಟನೆಯೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಮೃತ ದುರ್ದೈವಿ ಬಾಲಕನನ್ನು ಆಶಿಶ್ ಎಂದು ಗುರುತಿಸಲಾಗಿದ್ದು, ಈತ ಖಾಸಗಿ ಶಾಲೆಯೊಂದರಲ್ಲಿ 1 ನೇತರಗತಿಯಲ್ಲಿ ಓದುತ್ತಿದ್ದನು. ಬಾಲಕನನ್ನು ಉತ್ತರ ದಿಲ್ಲಿಯ ಸ್ವರೂಪ್ ನಗರದ ನಿವಾಸಿ ಭಾರತೀಯ ಆಡಳಿತಾತ್ಮಕ ಸೇವೆಯ ಆಕಾಂಕ್ಷಿ ಅವದೇಶ್ ಸಖ್ಯಾ ಕೊಲೆ ಮಾಡಿದ್ದಾನೆ.

ಏನಿದು ಘಟನೆ?: ಬಾಲಕ ಆಶಿಶ್ ಜನವರಿ 7ರಂದು ತನ್ನ ಚಿಕ್ಕಮ್ಮನ ಮನೆಗೆ ಹೋದವನು ಮತ್ತೆ ವಾಪಸ್ ಬರಲೇ ಇಲ್ಲ. ಹೀಗಾಗಿ ಪೋಷಕರು ತಮ್ಮ ಮಗ ನಾಪತ್ತೆಯಾಗಿರೋ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಬಳಿಕ ಪೊಲೀಸರು ಅನೇಕರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಈ ವೇಳೆ ಸಖ್ಯನ ಮೇಲೆ ಅನುಮಾನಗೊಂಡ ಪೊಲೀಸರು ಆತನ ಮನೆಗೆ ರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮೂಗಿಗೆ ವಾಸನೆ ಬಡಿದಿದೆ. ಕೂಡಲೇ ಪೊಲೀಸರು ಸಖ್ಯನನ್ನು ಪ್ರಶ್ನಿಸಿದಾಗ, ಕೋಣೆಯಲ್ಲಿ ಇಲಿ ಸತ್ತು ಬಿದ್ದಿರುವುದಾಗಿ ಹೇಳಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದಾನೆ.

ತಪ್ಪೊಪ್ಪಿಕೊಂಡ ಆರೋಪಿ: ಸಖ್ಯ ಹೇಳಿಕೆಯಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು, ಆತನ ಮನೆಯಲ್ಲಿ ಶೋಧ ಆರಂಭಿಸಿದ್ದಾರೆ. ಈ ವೇಳೆ ಆತನ ಮಲಗುತ್ತಿದ್ದ ಕೋಣೆಯ ಬೆಡ್ ಕೆಳಗೆ ಸೂಟ್ ಕೇಸ್ ಒಂದು ಪತ್ತೆಯಾಗಿದೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಶವವಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಸಖ್ಯನನ್ನು ವಿಚಾರಣೆಗೊಳಪಡಿಸಿದಾಗ ತಾನು ಬಾಲಕನನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಕೊಲೆಗೆ ಕಾರಣವೇನು?: ಬಾಲಕ ಆಶಿಶ್ ನನ್ನ ಜೊತೆ ಕ್ಲೋಸ್ ಆಗಿದ್ದನು. ಆದ್ರೆ ನನ್ನನ್ನು ಭೇಟಿಯಾಗಲು ಫೋಷಕರು ಆತನನ್ನು ಬಿಡುತ್ತಿರಲಿಲ್ಲ. ಹೀಗಾಗಿ ಬಾಲಕನ ಪೋಷಕರ ಮೇಲಿನ ಸಿಟ್ಟಿಗೆ ಆತನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಬಾಲಕನನ್ನು ಕೊಲೆಗೈದು ಒಂದು ತಿಂಗಳುಗಿಂತಲೂ ಅಧಿಕ ದಿನವಾಗಿದ್ದು, ಆ ದಿನದಂದಲೇ ಆರೋಪಿ ಬಾಲಕನ ಶವವನ್ನು ಪೆಟ್ಟಿಗೆಯಲ್ಲಿ ತುಂಬಿಸಿ ಮನೆಯಲ್ಲಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಾಸನೆ ಬರುತ್ತಿರುವ ಕುರಿತು ನೆರೆಮನೆಯವರು ಕೇಳಿದಾಗ ಇಲಿ ಸತ್ತಿರುವುದಾಗಿ ಹೇಳಿ ಮನೆ ತುಂಬಾ ಸುಗಂಧ ದ್ರವ್ಯಗಳನ್ನು ಹಚ್ಚಿ, ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದನು ಎಂಬುದಾಗಿ ವರದಿಯಾಗಿದೆ.

ಬಾಲಕ ವಾಸಿಸುತ್ತಿದ್ದ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದು, ಸಖ್ಯ ಬಾಲಕನನ್ನು ಅಪಹರಿಸಿರುವ ದೃಶ್ಯ ಸೆರೆಯಾಗಿದೆ. ಇನ್ನು ಮೃತ ಬಾಲಕನ ಪೋಷಕರಿಗೆ ಆರೋಪಿ ಸಖ್ಯನ ಪರಿಚಯವಿದ್ದು, ತನಿಖೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *