ಮಂಡ್ಯ: ಸುಮಾರು ಮೂವತ್ತು ಕೋತಿಗಳು ಒಂದೆಡೆಯಿದ್ರು ಕೋತಿಚೇಷ್ಟೆಯಾಗಲಿ, ಮರದಿಂದ ಮರಕ್ಕೆ ಚಾಕಚಕ್ಯತೆಯಿಂದ ನೆಗೆಯುವ ಲವಲವಿಕೆಯಾಗಲಿ ಅಲ್ಲಿರಲಿಲ್ಲ. ಆ ಮೂವತ್ತು ಕೋತಿಗಳನ್ನ ನೋಡಿದ್ರೆ ಎಂತಹವರ ಕಣ್ಣಾಲಿಗಳು ತುಂಬಿ ಬರುತ್ತಿದ್ವು. ಯಾಕಂದ್ರೆ ಆ ಕೋತಿಗಳನ್ನ ಯಾರೋ ಅಮಾನವೀಯವಾಗಿ ಕೊಂದು ನಿಷ್ಕರುಣೆಯಿಂದ ಎಸೆದು ಹೋಗಿದ್ರು.
ಇಂತಹದ್ದೊಂದು ಘಟನೆ ನಡೆದಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪಟ್ಟಣಗೇರಿ ಗ್ರಾಮದ ಹೊರವಲಯದಲ್ಲಿರುವ ಕಣಿವೆಬೋರಪ್ಪ ದೇವಸ್ಥಾನದ ಬಳಿ. ಗ್ರಾಮಸ್ಥರು ದೇವಸ್ಥಾನಕ್ಕೆ ಪೂಜೆಗೆಂದು ಬಂದಾಗ ಕೋತಿಗಳ ಮಾರಣ ಹೋಮದ ಪ್ರಕರಣ ಬೆಳಕಿಗೆ ಬಂದಿದೆ. ಆದ್ರೆ ಕೋತಿಗಳನ್ನ ಹೇಗೆ ಕೊಂದಿದ್ದಾರೆ? ಈ ಕೃತ್ಯವೆಸಗಿದವರು ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಕೋತಿಗಳ ಸಾವನ್ನು ನೋಡಿ ಮನನೊಂದ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗೆ ಸುದ್ದಿ ತಿಳಿಸಿ ಕಾದು ಕುಳಿತಿದ್ರು. ಆದ್ರೆ ತಡವಾಗಿ ಬಂದ ಅರಣ್ಯ ಸಿಬ್ಬಂದಿ ಕೋತಿಗಳನ್ನ ಯಾರು ಕೊಂದಿದ್ದಾರೆ, ಯಾವ ರೀತಿ ಕೊಂದಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಕೊಳ್ಳದೇ ಸುಮ್ಮನಾಗಿದ್ದಾರೆ. ಇದ್ರಿಂದ ಮನನೊಂದ ಗ್ರಾಮಸ್ಥರು ಸಾಕ್ಷಾತ್ ಹನುಮಂತನ ಸ್ವರೂಪವಾದ ಕೋತಿಗಳ ದುಸ್ಥಿತಿಗೆ ಮನನೊಂದು, ದೇವಸ್ಥಾನದ ಎದುರು ಗುಂಡಿ ತೆಗೆದು ಸಾಂಪ್ರದಾಯಿಕ ವಿಧಿ ವಿಧಾನದ ಮೂಲಕ ಕೋತಿಗಳ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಜೊತೆಗೆ ಕೋತಿಗಳ ಸಾವಿಗೆ ಕಾರಣರಾದವರಿಗೆ ಆ ಭಗವಂತ ಶಿಕ್ಷೆ ಕೊಡ್ತಾನೆ ಅಂತಾ ಹಿಡಿ ಶಾಪ ಹಾಕುತ್ತಿದ್ದಾರೆ.
ಯಾರೋ ದುಷ್ಕರ್ಮಿಗಳು ಮಾಡಿದ ತಪ್ಪಿಗೆ ಕೋತಿಗಳ ಮಾರಣಹೋಮ ನಡೆದು ಹೋಗಿದೆ. ಕಾಡಲ್ಲಿ ತಮ್ಮ ಪಾಡಿಗೆ ತಾವು ಬದುಕುತ್ತಿದ್ದ ಕೋತಿಗಳ ಸಾವು, ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಇನ್ನಾದ್ರು ಅರಣ್ಯ ಇಲಾಖೆಯವರು ಇಂತಹ ಪ್ರಕರಣಗಳು ನಡೆಯದಂತೆ ಆದಷ್ಟು ಎಚ್ಚರಿಕೆ ವಹಿಸಬೇಕಾಗಿದೆ.