ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ರದ್ದು

Public TV
1 Min Read

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದ ಹಿನ್ನೆಲೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್‌ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹೋಗುತ್ತಿರುತ್ತಾರೆ. ಆದರೆ ಸದ್ಯ ಕೆಆರ್‌ಎಸ್ ಡ್ಯಾಂನಲ್ಲಿ ಒಳಹರಿವು ಹಾಗೂ ಹೊರಹರಿವು ಹೆಚ್ಚಾಗಿದ್ದು, ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಇದರಿಂದಾಗಿ ಬೋಟಿಂಗ್ ರದ್ದು ಮಾಡಲಾಗಿದೆ.

ಕಾವೇರಿ ನದಿ ರಭಸವಾಗಿ ಹರಿಯುತ್ತಿದ್ದು, ಬೋಟ್ ಮೂಲಕ ನಡುಗಡ್ಡೆ ಬಳಿ ಹೋಗುವುದಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ದೂರದಲ್ಲೇ ನಿಂತು ಪಕ್ಷಿ ನೋಡಿ ಪ್ರವಾಸಿಗರು ವಾಪಸ್ ಹೋಗುತ್ತಿದ್ದಾರೆ. ಒಳಹರಿವು 10 ಸಾವಿರ ಕ್ಯೂಸೆಕ್‌ಗೆ ಇಳಿಯುವ ತನಕ ಬೋಟಿಂಗ್‌ಗೆ ಬ್ರೇಕ್ ಹಾಕಲಾಗಿದೆ. ಹೊರಹರಿವು ಮತ್ತಷ್ಟು ಹೆಚ್ಚಾದ್ರೆ ಪಕ್ಷಿ ಸಂಕುಲಕ್ಕೂ ಎಫೆಕ್ಟ್ ಆಗುವ ಸಾಧ್ಯತೆಯಿದೆ.

ಈಗಾಗಲೇ ನದಿ ಮಧ್ಯೆ ಇರುವ ನಡುಗಡ್ಡೆಗಳು ಅರ್ಧದಷ್ಟು ಮುಳುಗಡೆಯಾಗಿವೆ. ಒಂದು ಲಕ್ಷ ಕ್ಯೂಸೆಕ್‌ಗೆ ಹೊರಹರಿವು ಏರಿಕೆಯಾದರೆ ಭಾಗಶಃ ನಡುಗಡ್ಡೆಗಳು ಮುಳುಗುವ ಭೀತಿ ಶುರುವಾಗಿದೆ. ಆ ಸಮಯದಲ್ಲಿ ಪಕ್ಷಿಗಳ ಗೂಡು, ಮೊಟ್ಟೆಗಳು ಕೊಚ್ಚಿ ಹೋಗುವ ಆತಂಕ ಎದುರಾಗಿದೆ.

Share This Article