ನಿಗಮ ಮಂಡಳಿಯಲ್ಲಿಯೂ ಶಾಸಕ ಸುಧಾಕರ್‌ಗೆ ಕೊಕ್

Public TV
1 Min Read

ಬೆಂಗಳೂರು: ಸಚಿವ ಸ್ಥಾನಕ್ಕೆ ಸಾಕಷ್ಟು ಓಡಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಅವರಿಗೆ ನಿರೀಕ್ಷೆಯಲ್ಲಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವೂ ಕೈತಪ್ಪಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಳುಹಿಸಿದ್ದ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಾ.ಸುಧಾಕರ್ ಅವರನ್ನು ಸೂಚಿಸಲಾಗಿತ್ತು. ಆದರೆ ಸಿಎಂ ಕುಮಾರಸ್ವಾಮಿ ಅವರು ಅಂಕಿತ ಹಾಕಿದ ಪಟ್ಟಿಯಲ್ಲಿ ಶಾಸಕರ ಹೆಸರು ಕೈಬಿಡಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಈ ಮೂಲಕ ಕುಮಾರಸ್ವಾಮಿ ಅವರು ಶಾಸಕ ಸುಧಾಕರ್ ಅವರ ಮೇಲೆ ಮತ್ತೇ ದ್ವೇಷ ಮುಂದುವರಿಸಿದರಾ ಎನ್ನುವ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಇದನ್ನು ಓದಿ: ನಿಗಮ ಮಂಡಳಿ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಅಂಕಿತ, ಯಾರಿಗೆ ಯಾವ ಮಂಡಳಿ?

ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಡಾ.ಸುಧಾಕರ್ ಅವರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡಿಲ್ಲ ಎನ್ನಲಾಗಿದೆ. ಇತ್ತ ಬಿಡಿಎ, ಬಿಎಂಟಿಸಿ, ರೇಷ್ಮೆ ಕೈಗಾರಿಕಾ ನಿಗಮ, ಕೆಆರ್ ಡಿಸಿ ಮಂಡಳಿಗೆ ಯಾವುದೇ ಶಾಸಕರ ನೇಮಕವಾಗಿಲ್ಲ. ಹೀಗಾಗಿ ಡಾ.ಸುಧಾಕರ್ ಜೊತೆಗೆ ಸಂಭಾವ್ಯ ಪಟ್ಟಿಯಲ್ಲಿದ್ದ ಎಸ್.ಟಿ.ಸೋಮಶೇಖರ್, ಸುಬ್ಬಾರೆಡ್ಡಿ, ವೆಂಕಟರಮಣಯ್ಯ ಮತ್ತು ಎನ್.ಎ.ಹ್ಯಾರೀಸ್, ಗೋಪಾಲಸ್ವಾಮಿ ಅವರಿಗೂ ನಿರಾಸೆಯಾಗಿದೆ.

ನಿಗಮ ಮಂಡಳಿ ಪಟ್ಟಿಯಲ್ಲಿ ದಿನೇಶ್ ಗುಂಡೂರಾವ್ ಅವರು 19 ಶಾಸಕರ ಹೆಸರನ್ನು ಸೂಚಿಸಿದ್ದರು. ಆದರೆ ಅವರಲ್ಲಿ ಐವರು ಶಾಸಕರನ್ನು ಕೈಬಿಡಲಾಗಿದೆ. ಇತ್ತ ಸಂಸದೀಯ ಕಾರ್ಯದರ್ಶಿಗಳ ಲಿಸ್ಟ್ ನಿಂದ ಗೋಪಾಲಸ್ವಾಮಿ ಅವರಿಗೆ ಕೊಕ್ ನೀಡಲಾಗಿದೆ. ದೆಹಲಿ ವಿಶೇಷ ಪ್ರತಿನಿಧಿ ಸ್ಥಾನಕ್ಕೆ ಸೂಚಿಸಿದ್ದ ಶಾಸಕ ಅಜಯ್ ಸಿಂಗ್, ಯೋಜನ ಆಯೋಗದ ಉಪಾಧ್ಯಕ್ಷರ ಸ್ಥಾನಕ್ಕೆ ಸಲಹೆ ನೀಡಿದ್ದ ಶರಣಬಸಪ್ಪ ದರ್ಶನಾಪುರ, ಸಿಎಂ ರಾಜಕೀಯ ಕಾರ್ಯದರ್ಶಿಗೆ ಸೂಚಿಸಿದ್ದ ವಿ.ಮುನಿಯಪ್ಪ ಅವರ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಅವರು ಅಂಕಿತ ಹಾಕಿಲ್ಲ. ಹೀಗಾಗಿ ನಿಗಮ ಮಂಡಳಿ ನೇಮಕಾತಿಯಿಂದ 9 ಶಾಸಕರು ನಿರಾಸೆಗೆ ಗುರಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *