ಬೆಂಗಳೂರು: ಕುಟುಂಬಸ್ಥರು ಅಥವಾ ಸಂಬಂಧಿಕರು ಸಾವನ್ನಪ್ಪಿದಾಗ ಸಿಬ್ಬಂದಿ ರಜೆ ಕೇಳಿದರೆ ಕಂಪನಿಗಳು ರಜೆ ಕೊಡುತ್ತವೆ. ಆದರೆ ಬಿಎಂಟಿಸಿಯಲ್ಲಿ ರಜೆ ಬೇಕಾದರೆ ಶವದ ಫೋಟೋ, ಸತ್ತವನ ಫೋಟೋ ತಂದರೆ ಮಾತ್ರ ರಜೆ ಮಂಜೂರು ಆಗುತ್ತದೆ.
ಡಿಪೋ ನಂಬರ್ 33 ರಲ್ಲಿ ಸಿಬ್ಬಂದಿಯೊರ್ವ ಮೇಲಾಧಿಕಾರಿಗೆ ಡಿಪೋ ಮ್ಯಾನೇಜರ್ ವಿರುದ್ಧ ದೂರು ಬರೆದಿದ್ದು, ಈ ಪತ್ರ ಪಬ್ಲಿಕ್ ಟಿವಿಗೂ ಲಭ್ಯವಾಗಿದೆ.
ಸಂಬಂಧಿಕರು ಸಾವನ್ನಪ್ಪಿದಾಗ ರಜೆ ಬೇಕಾಗುತ್ತೆ. ಅಂತಹ ಸಂದರ್ಭದಲ್ಲಿ ಮಾನವೀಯತೆ ಮರೆತು ರಜೆ ಕೊಡದೇ ಸತಾಯಿಸಿ, ಭಾವಚಿತ್ರ ತಂದು ಕೊಡು ಎಂದು ಹೇಳಿದರೆ ಶವದ ಜೊತೆ ನಾವು ಹೇಗೆ ಫೋಟೋ ತೆಗೆದುಕೊಳ್ಳಲಿ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ದೂರು ಕೊಟ್ಟಿರುವ ಸಿಬ್ಬಂದಿ ತನ್ನ ಹೆಸರನ್ನು ಮಾತ್ರ ಉಲ್ಲೇಖಿಸಿಲ್ಲ.
ದೂರಿನಲ್ಲಿ ಏನಿದೆ?
ಅನಾರೋಗ್ಯದಿಂದ ಓಡಾಡಲು ಸಾಧ್ಯವಾಗದ ಸಮಯದಲ್ಲಿ ದೂರವಾಣಿ ಮುಖಾಂತರ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದರೆ ಇಂದೇ ಖುದ್ದಾಗಿ ರಜೆ ಅರ್ಜಿ ನೀಡಿದರೆ ರಜೆ ಮಂಜೂರು ಮಾಡುತ್ತೇನೆ ಇಲ್ಲವಾದರೆ ಗೈರು ಹಾಜರು ಮಾಡುತ್ತೇನೆ ಮತ್ತು ಬೇರೊಂದು ಘಟಕಕ್ಕೆ ವರ್ಗವಣೆ ಮಾಡುವುದಾಗಿ ಬೆದರಿಕೆ ಒಡ್ಡುವುದು. ಈ ರೀತಿ ಪ್ರಕರಣಗಳು ಅಧಿಕವಾಗಿ ನಡೆಯುತ್ತಿರುತ್ತವೆ ಎಂದು ಉಲ್ಲೇಖಿಸಿದ್ದಾರೆ.
ಅಲ್ಲದೇ ಕುಟುಂಬದ ಮತ್ತು ಸಂಬಂಧಿಕರ ಆಕಾಲಿಕ ಮರಣ ಹೊಂದಿದಾಗ ರಜೆ ಕೇಳಿದರೆ, ರಜೆ ಮಂಜೂರು ಮಾಡಲು ಶವದ ಜೊತೆ ಭಾವಚಿತ್ರವನ್ನೂ ನೀಡಿ ಎಂದು ಅಜ್ಞಾಪಿಸುತ್ತಾರೆ. ದುಃಖದಿಂದ ಕೂಡಿದ ಸಾವಿನ ಮನೆಯಲ್ಲಿ ಶವದ ಜೊತೆ ಭಾವಚಿತ್ರ ತೆಗೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪತ್ರದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv