ನಿತ್ಯಾನಂದನಿಗೆ ಶಾಕ್ ಕೊಡಲು ಪೊಲೀಸರು ಪ್ಲಾನ್

Public TV
2 Min Read

ಗಾಂಧಿನಗರ: ಸ್ವಯಂಘೋಷಿತ ದೇವ ಮಾನವ ನಿತ್ಯಾನಂದನಿಗೆ ಶಾಕ್ ಕೊಡಲು ಗುಜರಾತಿನ ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ. ನಿತ್ಯಾನಂದನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ನಿತ್ಯಾನಂದನ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು. ಈಗಾಗಲೇ ನಿತ್ಯಾನಂದನ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇದೀಗ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ರೆ ನಿತ್ಯಾನಂದ ಸಂಕಷ್ಟಕ್ಕೆ ಸಿಲುಕೋದು ಖಚಿತ. ಸದ್ಯ ನಿತ್ಯಾನಂದ ವಿದೇಶದಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದ್ವೀಪವೊಂದನ್ನು ಖರೀದಿಸಿರುವ ನಿತ್ಯಾನಂದ ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿದ್ದಾನೆ ಎಂದು ವರದಿಗಳು ಬಿತ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ಇಂಟರ್ ಪೋಲ್ ಬಳಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಗುಜರಾತ್ ಪೊಲೀಸರು ಮನವಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ:
ಯುವತಿಯರಿಗೆ ಚಿತ್ರ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನಿಗಾಗಿ ಗುಜರಾತ್ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಬೆಂಗಳೂರಿನ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಿತ್ಯಾನಂದನಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದು, ನಿತ್ಯಾನಂದನ ಆಶ್ರಮದ ಅಹಮದಾಬಾದ್ ಶಾಖೆಯಲ್ಲಿದ್ದ ಹೆಣ್ಣುಮಕ್ಕಳನ್ನು ಹಿಂಸಿಸುತ್ತಿದ್ದ ಎಂದು ದಂಪತಿ ದೂರು ನೀಡಿದ್ದಾರೆ.

ಅಹ್ಮದಾಬಾದ್ ಜಿಲ್ಲೆಯ ಹಿರಾಪುರ ಗ್ರಾಮದಲ್ಲಿರುವ ಶಾಲೆಯೊಂದರ ಆವರಣದಲ್ಲಿ ನಿತ್ಯಾನಂದನ ಆಶ್ರಮವಿದೆ. ಅಲ್ಲದೆ ಬೆಂಗಳೂರಿನ ಬಿಡದಿಯಲ್ಲಿ ಧ್ಯಾನಪೀಠಂ ಎಂಬ ಹೆಸರಿನ ವಿಶಾಲವಾದ ಆಶ್ರಮವನ್ನು ಸಹ ನಡೆಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಶಿಷ್ಯೆ ಮೇಲೆಯೇ ಅತ್ಯಾಚಾರ ಎಸಗಿರುವ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ ಒಂದು ವರ್ಷದಿಂದಲೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ.

ಸೆಪ್ಟೆಂಬರ್ 2018ರಲ್ಲಿ ನಿತ್ಯಾನಂದನ ಪಾಸ್‍ಪೋರ್ಟ್ ಅವಧಿ ಮುಗಿದ ಕಾರಣ ಆತ ಅಕ್ರಮವಾಗಿ ದೇಶವನ್ನು ತೊರೆದಿರಬಹುದು ಎಂದು ಗುಜರಾತ್ ಪೊಲೀಸರು ಶಂಕಿಸಿದ್ದಾರೆ. ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪಾಸ್‍ಪೋರ್ಟ್ ನವೀಕರಿಸುವ ಕುರಿತ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಬ್ಲೂ ಕಾರ್ನರ್ ನೋಟಿಸ್: ಮತ್ತೊಂದು ದೇಶದಲ್ಲಿರುವ ಅಪರಾಧಿ ಅಥವಾ ಆರೋಪಿಯ ಪತ್ತೆಗಾಗಿ ಮತ್ತು ಕುಟುಂಬದ, ವ್ಯವಹಾರ ವಿವರಣೆ ಪಡೆಯುದಕ್ಕಾಗಿ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತದೆ. ಈ ನೋಟಿಸ್ ಹೊರಡಿಸಿದಾಗ ಆರೋಪಿಗೆ ಆಶ್ರಯ ನೀಡಿದ ದೇಶ ಆತನನ್ನು ಬಂಧಿಸಲ್ಲ. ಆದರೆ ಆರೋಪಿ ಅಥವಾ ಅಪರಾಧಿಯ ಕುರಿತು ವಿವರಣೆ ನೀಡುತ್ತದೆ.

ರೆಡ್ ಕಾರ್ನರ್ ನೋಟಿಸ್: ಅಪರಾಧಿ ಅಥವಾ ಆರೋಪಿ ಮತ್ತೊಂದು ದೇಶದಲ್ಲಿದ್ದಾಗ ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡುವುದು. ಅಂತಹ ವ್ಯಕ್ತಿಯನ್ನು ಪತ್ತೆ ಹಚ್ಚಿ ತಾತ್ಕಾಲಿಕವಾಗಿ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ವಿನಂತಿಸಿಕೊಳ್ಳಲು ಈ ನೋಟಿಸ್ ಜಾರಿಯಾಗುತ್ತದೆ

Share This Article
Leave a Comment

Leave a Reply

Your email address will not be published. Required fields are marked *