Bihar Election | ಆರ್‌ಜೆಡಿ ಅಭ್ಯರ್ಥಿ ಶ್ವೇತಾ ಸುಮನ್ ನಾಮಪತ್ರ ತಿರಸ್ಕೃತ – ಮಾಧ್ಯಮಗಳ ಮುಂದೆ ಕಣ್ಣೀರು

Public TV
1 Min Read
  • ಬಿಜೆಪಿ ವಿರುದ್ಧ ಅಧಿಕಾರಿಗಳ ಮೇಲೆ ಒತ್ತಡ ಆರೋಪ 

ಪಾಟ್ನಾ: ಬಿಹಾರದ ಮೊಹಾನಿಯಾ ವಿಧಾನಸಭಾ ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿ ಶ್ವೇತಾ ಸುಮನ್ (Shweta Suman)ಅವರ ನಾಮಪತ್ರವನ್ನು ತಿರಸ್ಕೃತಗೊಂಡಿದೆ. ಶ್ವೇತಾ ಸುಮನ್ ಉತ್ತರ ಪ್ರದೇಶದ ನಿವಾಸಿ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಕಾರಣಕ್ಕಾಗಿ ಅವರ ನಾಮಪತ್ರವನ್ನು ಚುನಾವಣಾ ಆಯೋಗ (ECI) ರದ್ದುಗೊಳಿಸಿದೆ. ಈ ಮೂಲಕ ಮಹಾಘಟಬಂಧನ್‌ (Mahagathbandhan) ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಾ ಸುಮನ್, ಬಿಜೆಪಿ ಸಂವಿಧಾನವನ್ನು ಮುಗಿಸಲು ಹೊರಟಿದೆ. ನಾಮಪತ್ರ ತಿರಸ್ಕರಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗಿತ್ತು. ಅಧಿಕಾರಿಗಳು ಅಸಹಾಯಕರು, ನಾನು ಖಂಡಿತವಾಗಿಯೂ ಕೋರ್ಟ್‌ಗೆ ಹೋಗುತ್ತೇನೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಸಂಗೀತಾ, ಅಧಿಸೂಚನೆ ದಿನಾಂಕದ ನಂತರ ತಮ್ಮ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ ಅವರು ಬಿಜೆಪಿಯಿಂದ ಬಂದವರಾಗಿರುವುದರಿಂದ ಏನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಮಾತನಾಡುವ ವೇಳೆ ಅವರು ಕಣ್ಣೀರಿಟ್ಟಿದ್ದಾರೆ.

ಇದಕ್ಕೂ ಮುನ್ನ ಸುಗೌಲಿಯ ಹಾಲಿ ಆರ್‌ಜೆಡಿ ಶಾಸಕ ಶಶಿಭೂಷಣ್ ಸಿಂಗ್, ವಿಕಾಸಶೀಲ ಇನ್ಸಾನ್ ಪಕ್ಷದ (ವಿಐಪಿ) ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು. ದಾಖಲೆಗಳಲ್ಲಿ ದೋಷ ಕಂಡು ಬಂದಿದ್ದರಿಂದ ನಾಮಪತ್ರ ತಿರಸ್ಕಾರಗೊಂಡಿತ್ತು. ಆರ್‌ಜೆಡಿ ಪಕ್ಷದಿಂದ ಟಿಕೆಟ್‌ ಸಿಗದೇ ಬಂಡಾಯ ಅಭ್ಯಾರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಓಂ ಪ್ರಕಾಶ್ ಚೌಧರಿ ಅವರ ನಾಮಪತ್ರವನ್ನು ಪರಿಶೀಲನೆಯ ನಂತರ ರದ್ದುಗೊಳಿಸಲಾಗಿದೆ. ಅವರ ನಾಮಪತ್ರದಲ್ಲಿ ಹಲವಾರು ಪುಟಗಳು ಖಾಲಿ ಇದ್ದವು ಎಂದು ವರದಿಯಾಗಿದೆ.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ (Bihar Election)ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.

Share This Article