ನಭೋ ಮಂಡಲದಲ್ಲಿ ಖಗೋಳ ಕೌತುಕ – ಆಗಸದಲ್ಲಿ ರಕ್ತರೂಪಿ ಚಂದ್ರನ ದರ್ಶನ

Public TV
2 Min Read

– ಬೆಂಗಳೂರಿನಲ್ಲಿ ನೆರಳು-ಬೆಳಕಿನ ಆಟದ ಬಳಿಕ ರಕ್ತಚಂದ್ರನ ಚಮತ್ಕಾರ

ಬೆಂಗಳೂರು: ಖಗೋಳ ಕೌತುಕಕ್ಕೆ ನಭೋ ಮಂಡಲ ಸಾಕ್ಷಿ ಆಗಿದೆ. ಆಗಸದಲ್ಲಿ ಹಾಲ್ಬೆಳದಿಂಗಳಂತೆ ಕಾಣುತ್ತಿದ್ದ ಚಂದಿರನಿಗೆ ರಾತ್ರಿ ಗ್ರಹಣ ಹಿಡಿದಿತ್ತು.

ಸರಿಯಾಗಿ 9 ಗಂಟೆ 57 ನಿಮಿಷಕ್ಕೆ ಗ್ರಹಣ ಶುರುವಾಯಿತು. ಬಾನಂಗಳದಲ್ಲಿ ಚಂದಿರ ಗ್ರಹಣದಿಂದ ಬಂಧಿ ಆಗಿದ್ದ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಅದೇ ರೀತಿ ಚಂದ್ರನ ಹೆಚ್ಚಿನ ಭಾಗ ಭೂಮಿಯ ನೆರಳು ಆವರಿಸಿದಾಗ ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿದ. ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಇಡೀ ವಿಶ್ವ ಸಾಕ್ಷಿಯಾಗಿತು. ಇದನ್ನೂ ಓದಿ: Blood Moon Photo Gallery | ಬಾನಂಗಳದಲ್ಲಿ ಖಗೋಳ ಕೌತುಕ – ರಾಜ್ಯದಲ್ಲಿ ಎಲ್ಲೆಲ್ಲಿ ರಕ್ತಚಂದ್ರನ ದರ್ಶನ?

ರಾತ್ರಿ 9 ಗಂಟೆ 57 ನಿಮಿಷಕ್ಕೆ ಸರಿಯಾಗಿ ಆರಂಭವಾದ ಚಂದ್ರಗ್ರಹಣ ಮೊದಲು ಗೋಚರಿಸಿದ್ದು ಸೈಪ್ರಸ್‌ನಲ್ಲಿ. ಭಾರತದಲ್ಲಿ ಮೊದಲ ಗೋಚರಿಸಿದ್ದು ಲಡಾಖ್‌ನಲ್ಲಿ. ಟರ್ಕಿ, ಸೈಪ್ರಸ್, ಇಂಡೋನೇಷ್ಯಾದ ಜಕಾರ್ತ, ಆಸ್ಟ್ರೇಲಿಯಾ ಸಿಡ್ನಿ, ಚೀನಾದ ಬೀಜಿಂಗ್, ದುಬೈನಲ್ಲಿ ಶ್ವೇತ ವರ್ಣದ ಚಂದಿರ ಕೆಂಬಣ್ಣದಲ್ಲಿ ಗೋಚರಿಸಿತು. ಇದನ್ನೂ ಓದಿ: Video | ಸೂರ್ಯ-ಭೂಮಿ-ಚಂದ್ರ ಒಂದೇ ಸಾಲಿನಲ್ಲಿ ಬರಲು ಕಾರಣವೇನು?

ಬೆಂಗ್ಳೂರಲ್ಲಿ ಗ್ರಹಣ ಗೋಚರ
ಇನ್ನೂ ಬೆಂಗಳೂರಿನಲ್ಲಿ ಆರಂಭದ ಒಂದು ಗಂಟೆ ಕಳೆದರೂ ಮೋಡದ ಮರೆಯಲ್ಲಿ ಆಟವಾಡುತ್ತಿದ್ದ ಚಂದಿರ ಬಳಿಕ ಕಿತ್ತಳೆ ಬಣ್ಣ, ನಂತರ ರಕ್ತ ರೂಪಕ್ಕೆ ತಿರುಗಿದ. ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ವಯೋವೃದ್ಧರು, ಕುಟುಂಬ ಸಮೇತ ಆಗಮಿಸಿ ತಾರಾಲಯದಲ್ಲಿ ಕಣ್ತುಂಬಿಕೊಂಡರು. 4 ಟೆಲಿಸ್ಕೋಪ್, 1 ಎಲ್‌ಸಿಡಿ ವ್ಯವಸ್ಥೆ ಮಾಡಲಾಗಿತ್ತು. ಮತ್ತೊಂದ್ಕಡೆ ಕೋರಮಂಗಲದ ಭಾರತೀಯ ಖಗೋಳ ಭೌತ ವಿಜ್ಞಾನ ಸಂಸ್ಥೆಯಲ್ಲೂ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನರು ಗ್ರಹಣ ವೀಕ್ಷಣೆ ಮಾಡಿ ಖಗೋಳ ಕೌತುಕ ಕಣ್ತುಂಬಿಕೊಂಡರು.

ಅಲ್ಲದೇ ರಾಜ್ಯದ ವಿವಿಧೆಡೆ ಆಕಾಶದಲ್ಲಿ ಹುಣ್ಣಿಮೆ ಚಂದಿರನೊಡನೆ ನೆರಳು ಬೆಳಕಿನ ಆಟ ನಡೆದಿತ್ತು. ಬಾನಂಗಳ ಬೆಳಗುವ ಚಂದ್ರನನ್ನು ಭೂಮಿಯ ನೆರಳು ಆವರಿಸಿತ್ತು. ರಾತ್ರಿ 11 ಗಂಟೆ ಸುಮಾರಿಗೆ ಚಂದ್ರಗ್ರಹಣ ಉತ್ತುಂಗ ಸ್ಥಿತಿ ತಲುಪಿತ್ತು. ಆಗಸದಲ್ಲಿ ಚಂದ್ರ ರಕ್ತರೂಪಿಯಾಗಿ ಕಂಗೊಳಿಸಿದ. ಭಾರತ ಸೇರಿದಂತೆ ವಿಶ್ವದ ಹಲವೆಡೆ ಚಂದ್ರ ಗ್ರಹಣವನ್ನು ಜನರು ಕಣ್ತುಂಬಿಕೊಂಡರು. ಇದನ್ನೂ ಓದಿ: ಬಾನಂಗಳದಲ್ಲಿ ರಕ್ತ ಚಂದ್ರಗ್ರಹಣ ಗೋಚರ – ವಿಸ್ಮಯ ಕಣ್ತುಂಬಿಕೊಂಡ ಜನ

ರಾಜ್ಯದ ವಿವಿಧೆಡೆ ರಕ್ತ ಚಂದ್ರನ ದರ್ಶನ
ಬೆಂಗಳೂರು ಜೊತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಚಂದ್ರಗ್ರಹಣವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಬಾನಂಗಳದ ವಿಸ್ಮಯವನ್ನು ಬರಿಗಣ್ಣಿನಲ್ಲಿ ಕಂಡು ಸಂತಸಗೊಂಡಿದ್ದಾರೆ. ದಾವಣಗೆರೆಯಲ್ಲಿ ಮನೆ ಮನೆ ವಿಜ್ಞಾನ ದಾಸೋಹ ಹಾಗೂ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯಿಂದ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಇರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಚಂದ್ರ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದ್ದ ಕಾರಣ ಚಂದ್ರಗ್ರಹಣ ಗೋಚರವಾಗಿಲ್ಲ.. ಗ್ರಹಣ ವೀಕ್ಷಣೆಗೆ ಕಾಯ್ದಿದ್ದ ಜನರು ನಿರಾಸೆ ಉಂಟಾಯ್ತು. ಇದನ್ನೂ ಓದಿ: Blood Moon Photo Gallery | ವಿದೇಶಗಳಲ್ಲೂ ರಕ್ತಚಂದ್ರನ ಚಮತ್ಕಾರ – ನೀವೂ ಕಣ್ತುಂಬಿಕೊಳ್ಳಿ

Share This Article