ಹೆಸರಾಂತ ಬ್ಲಡ್ ಬ್ಯಾಂಕ್‍ನಲ್ಲೇ ಅಕ್ರಮ ಮಾರಾಟ- 13 ಲಕ್ಷ ರೂ. ಮೋಸ..!

Public TV
2 Min Read

– ಬ್ಲಡ್ ಬ್ಯಾಂಕ್ ಮೇಲ್ವಿಚಾರಕನಿಂದಲೇ ಅಕ್ರಮ ದಂಧೆ

ಚಿಕ್ಕಬಳ್ಳಾಪುರ: ರಾಜ್ಯದಲ್ಲೇ ಹೆಸರಾಂತ ಬ್ಲಡ್ ಬ್ಯಾಂಕ್‍ನಲ್ಲೇ ಸಂಸ್ಥೆಯ ಮೇಲ್ವಿಚಾರಕನೊರ್ವ ಲಕ್ಷಾಂತರ ರೂಪಾಯಿ ಮೌಲ್ಯದ ರಕ್ತದ ಉತ್ಪನ್ನ ಪ್ಲಾಸ್ಮಾವನ್ನು ಅಕ್ರಮವಾಗಿ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.

ಜಿಲ್ಲೆಯ ರೆಡ್‍ಕ್ರಾಸ್ ಸಂಸ್ಥೆಯ ರಕ್ತನಿಧಿ ಕೇಂದ್ರ ರಾಜ್ಯದಲ್ಲೇ ಮಾದರಿ ಕೇಂದ್ರ ಎಂದು ಹೆಸರುವಾಸಿ. ಇಂತಹ ಮಾದರಿ ಬ್ಲಡ್ ಬ್ಯಾಂಕ್‍ನಲ್ಲೇ ಸಂಸ್ಥೆಯ ಮೇಲ್ವಿಚಾರಕ ರವಿ ಲಂಬಾಣಿ ಎಂಬಾತ ಬರೋಬ್ಬರಿ 13 ಲಕ್ಷ ರೂಪಾಯಿ ಮೌಲ್ಯದ ರಕ್ತದ ಉತ್ಪನ್ನ ಪ್ಲಾಸ್ಮಾವನ್ನು ಅಕ್ರಮವಾಗಿ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರು ಅನ್ನೋ ಹಾಗೆ ಆಡಳಿತ ಮಂಡಳಿ ಈ ಕುರಿತು ತಡವಾಗಿ ಎಚ್ಚೆತ್ತಿದ್ದು, ಕೊನೆಗೆ ದುಡ್ಡು ಕೊಡಿಸುವಂತೆ ಪೋಲಿಸರ ಮೊರೆ ಹೋಗಿದೆ.

ಮನುಷ್ಯರ ಜೀವ ಉಳಿಸೋ ಜೀವಾಮೃತವನ್ನೇ ಕದಿಯೋ ಅಕ್ರಮ ದಂಧೆ ಬೆಳಕಿಗೆ ಬಂದಿದೆ. ರವಿ ಲಂಬಾಣಿ ರಕ್ತದಿಂದ ಬೇರ್ಪಡಿಸುವ ದುಬಾರಿ ಮೌಲ್ಯದ ಪ್ಲಾಸ್ಮಾವನ್ನು ಅಕ್ರಮವಾಗಿ ಕೆಲವು ಕಂಪನಿಗಳಿಗೆ ಮಾರಾಟ ಮಾಡಿ, ಬರೋಬ್ಬರಿ 13 ಲಕ್ಷ ರೂಪಾಯಿಗಳನ್ನು ನುಂಗಿ ನೀರು ಕುಡಿದಿದ್ದಾನೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಆರೋಪಿಸಿದೆ.

ರಕ್ತನಿಧಿ ಕೇಂದ್ರದಲ್ಲಿ ಪ್ಲಾಸ್ಮಾ ಬೇರ್ಪಡಿಸಿದ ನಂತರ ರಿಲಯನ್ಸ್ ಕಂಪನಿಗೆ ಕೆಜಿ ಲೆಕ್ಕದಲ್ಲಿ ಮಾರಾಟವಾಗ್ತಿತ್ತು. ಆದ್ರೆ ಆರೋಪಿ ರವಿ ಹೆಮರಸ್ ಅನ್ನೋ ಹೈದರಾಬಾದ್ ಮೂಲದ ಕಂಪನಿಗೆ ಪ್ಲಾಸ್ಮಾ ಮಾರಾಟಕ್ಕೆ ಒಪ್ಪಂದ ಮಾಡಿಸಿದ್ದಾನೆ. 2015 ರಿಂದ 2016ರವರೆಗೆ 1726 ಲೀಟರ್ ಬ್ಲಡ್ ಪ್ಲಾಸ್ಮಾ ಉತ್ಪಾದನೆಯಾಗಿದ್ರೂ, ರವಿ 880 ಲೀಟರ್ ಪ್ಲಾಸ್ಮಾ ಮಾತ್ರ ಉತ್ಪಾದನೆಯಾಗಿದೆ ಅಂತ ಲೆಕ್ಕ ತೋರಿಸಿ ದುಡ್ಡು ನುಂಗಿದ್ದಾನೆ. ಈ ಕುರಿತು ಪ್ರಶ್ನಿಸಿದ್ರೆ ನನ್ನದೇನು ತಪ್ಪಿಲ್ಲ, ಹಿಂದಿನ ಕಾರ್ಯದರ್ಶಿಗಳು ಹೇಳಿದಂತೆ ಮಾಡಿದ್ದೇನೆ ಅಂತ ಉತ್ತರಿಸುತ್ತಿದ್ದಾನೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರೆಡ್‍ಕ್ರಾಸ್ ಆಡಳಿತ ಮಂಡಳಿ, ತಮಗೆ ನಷ್ಟವಾಗಿರುವ ಹಣ ಕೊಡಿಸಿ, ಆರೋಪಿ ರವಿ ಲಂಬಾಣಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *