ಹುತಾತ್ಮ ಯೋಧರ ಕುಟುಂಬಗಳಿಗೆ 110 ಕೋಟಿ ನೆರವು ನೀಡಲು ಮುಂದಾದ ಅಂಧ ವಿಜ್ಞಾನಿ

Public TV
1 Min Read

ಮುಂಬೈ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಕುಟುಂಬಕ್ಕೆ 110 ಕೋಟಿ ರೂ. ನೀಡಲು ಅಂಧ ವಿಜ್ಞಾನಿಯೊಬ್ಬರು ಮುಂದಾಗಿದ್ದಾರೆ.

ಮೂಲತಃ ರಾಜಸ್ಥಾನದ ಕೋಟಾ ಪ್ರದೇಶದವರಾದ ಮುರ್ತಾಜಾ.ಎ.ಹಮೀದ್ ಅವರು ಸಂಶೋಧಕ ಹಾಗೂ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಟ್ಟಿದಾಗಿನಿಂದಲೂ ಇವರಿಗೆ ಕಣ್ಣು ಕಾಣಿಸುತ್ತಿಲ್ಲ. ಆದರೇ ಇವರು ಅಂಗವೈಫಲ್ಯವನ್ನು ಮರೆತು ಸಾಧನೆ ಮಾಡಿದ್ದಾರೆ.

ಸದ್ಯ ಮುಂಬೈನಲ್ಲಿ ನೆಲೆಸಿರುವ ಹಮೀದ್ ಅವರು 110 ಕೋಟಿ ರೂ. ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ವಿಜ್ಞಾನಿ ಪ್ರಧಾನಿ ಕಚೇರಿಗೆ ಇ-ಮೇಲ್ ಸಂದೇಶ ಕಳುಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೇಳಿದ್ದಾರೆ.

ಭಾನುವಾರ ಬೆಳಗ್ಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಉಪಕಾರ್ಯದರ್ಶಿ ಅಗ್ನಿ ಕುಮಾರ್ ದಾಸ್ ಅವರು ಹಮೀದ್ ಅವರಿಗೆ ಕರೆ ಮಾಡಿ ತಮ್ಮ ವಿವರವನ್ನು ಕಳುಹಿಸುವಂತೆ ತಿಳಿಸಿದ್ದಾರೆ.

ದೇಶಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಡುವ ಯೋಧರ ಕುಟಂಬಗಳ ಬೆಂಬಲಕ್ಕೆ ನಿಲ್ಲಬೇಕೆಂಬ ಆಸೆ ಇದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಯೋಧರ ನೆರವಿಗೆ ನಿಲ್ಲಬೇಕು. ದೇಶಕ್ಕಾಗಿ ತಮ್ಮ ಕುಟುಂಬವನ್ನು ಬಿಟ್ಟು ಗಡಿಯಲ್ಲಿ ನಿಂತು ನಮ್ಮೆಲ್ಲರ ಕುಟುಂಬವನ್ನು ಯೋಧರು ಕಾಯುತ್ತಾರೆ ಎಂದು ಹಮೀದ್ ತಿಳಿಸಿದ್ದಾರೆ.

ಹಮೀದ್ ಅವರು `ಇಂಧನ ಉರಿತ ವಿಕಿರಣ ತಂತ್ರಜ್ಞಾನ’ (Fuel Burn Radiation Technology)ವನ್ನು ಸಂಶೋಧಿಸಿದ್ದಾರೆ. ಜಿಪಿಎಸ್ ಹಾಗೂ ಕ್ಯಾಮೆರಾ ಸೌಲಭ್ಯವಿಲ್ಲದ ವಾಹನಗಳನ್ನು ಈ ತಂತ್ರಜ್ಞಾನದ ಮೂಲಕ ಪತ್ತೆ ಮಾಡಬಹುದು. ಹಮೀದ್ ಈ ತಂತ್ರಜ್ಞಾನವನ್ನು 2016ರಲ್ಲಿಯೇ ಕೇಂದ್ರ ಸರ್ಕಾರಕ್ಕೆ ಉಚಿತವಾಗಿ ನೀಡಿದ್ದರು. ಎರಡು ವರ್ಷಗಳ ಬಳಿಕ 2018ರಲ್ಲಿ ಈ ತಂತ್ರಜ್ಞಾನವನ್ನು ಬಳಸಲು ಸರ್ಕಾರ ಅನುಮೋದನೆ ನೀಡಿತ್ತು.

ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಸಿಆರ್‍ಪಿಎಫ್‍ನ 40 ಯೋಧರು ಹುತಾತ್ಮರಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *