ಮಾಟ ಮಂತ್ರ ಮಾಡಿದ್ರೆ ನಮಗೆ ತಟ್ಟಲ್ಲ, ಮಾಡಿದವರಿಗೆ ಅದು ರಿವರ್ಸ್ ಆಗುತ್ತೆ- ರೇವಣ್ಣ

Public TV
2 Min Read

ಹಾಸನ: ನಮ್ಮ ಸರ್ಕಾರಕ್ಕೆ ಯಾರೇ ಮಾಟ ಮಂತ್ರ ಮಾಡಿದರೂ ತಟ್ಟಲ್ಲ, ಯಾರು ಮಾಡಿಸುತ್ತಾರೋ ಅವರಿಗೆ ಅದು ರಿವರ್ಸ್ ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

ಯಡಿಯೂರಪ್ಪ ಅವರು ಕೇರಳಕ್ಕೆ ಮಾಟ ಮಂತ್ರ ಮಾಡಿಸಿಕೊಂಡು ಬರಲು ಹೋಗಿದ್ದಾರೆ ಎನ್ನುವ ಸುದ್ದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾರೇ ಮಾಟ ಮಂತ್ರ ಮಾಡಿದರೂ ನಮಗೇನೂ ತಟ್ಟಲ್ಲ, ಯಾರು ಮಾಡಿಸುತ್ತಾರೋ ಅವರಿಗೆ ಅದು ರಿವರ್ಸ್ ಆಗುತ್ತದೆ ಎಂದು ಹೇಳಿದರು.

ಹಾಸನ ಕ್ಷೇತ್ರಕ್ಕೆ ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳ ಆದೇಶದ ಪ್ರತಿ ತೋರಿಸಲಿ. ನಾವು ಕೇಂದ್ರದ ಜೊತೆ ಸತತ ಪ್ರಯತ್ನ ಮಾಡಿ ರಾಜ್ಯದಲ್ಲಿ ಹೆದ್ದಾರಿ ಯೋಜನೆಗಳನ್ನು ತಂದಿದ್ದೇವೆ. ರಾಜ್ಯ ಸರ್ಕಾರ 10 ರೂಪಾಯಿ ಕೂಡ ಕೊಟ್ಟಿಲ್ಲ. ವಿಷಯ ಗೊತ್ತಿದ್ದರೆ ಮಾತಾಡಲಿ ಇಲ್ಲವಾದರೆ ಸುಮ್ಮನಿರಲಿ ಎಂದು ಮಾಜಿ ಸಚಿವ ಶಿವರಾಂ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಯಡಿಯೂರಪ್ಪ ತಮ್ಮ ಅವಧಿಯಲ್ಲಿ ಹಾಸನಕ್ಕೆ ಏನು ಕಡಿದು ಕಟ್ಟೆ ಹಾಕಿದ್ದಾರೆ. ಬಿಜೆಪಿ-ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಏನು ಮಾಡಿದೆ ಎನ್ನುವುದನ್ನು ಹೇಳಲಿ ಎಂದು ಅವರು ಸವಾಲ್ ಹಾಕಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಚಾಲನೆ ನೀಡಿದ ಯೋಜನೆಗಳು ನಮ್ಮ ಅವಧಿಯಲ್ಲಿ ಮಾಡಿದ್ದು ಎಂದು ಶಿವರಾಂ ಹೇಳಿಕೊಂಡಿದ್ದಾರೆ. ನನ್ನ ಕಡೆಯಿಂದ ಕಾಂಗ್ರೆಸ್ ಸದಸ್ಯರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಸೇರಿ ಯಾವುದೇ ನಾಯಕರು ನನ್ನನ್ನು ಪ್ರಶ್ನಿಸಿದರೇ ಉತ್ತರ ಕೊಡಲು ಸಿದ್ಧ. ನಾನು ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ವರ್ಗಾವಣೆ ಸೇರಿ ಯಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಬೇಕಾದರೆ ಸಮನ್ವಯ ಸಮಿತಿ ಸಭೆಯಲ್ಲೇ ವಿವರಿಸಿ ಹೇಳುವೆ ಎಂದು ಹೇಳಿದ್ದಾರೆ.

ಬದುಕಿರುವವರೆಗೂ ನಾನು, ಕುಮಾರಸ್ವಾಮಿ ಹೊಡೆದಾಡಲ್ಲ. ಸಹೋದರರು ಕಚ್ಚಾಡುತ್ತಾರೆ ಎಂದುಕೊಂಡಿದ್ದರೆ ಅದು ಭ್ರಮೆ. ನಾನು ಸಿಎಂ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೆಯೆ ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ ಎಂದು ವಿಶ್ವಾಸವಿದೆ.

ಕುಲದೇವರು ಈಶ್ವರ, ಶೃಂಗೇರಿ ಶಾರದೆ ಆಶೀರ್ವಾದ ಇರೋವರೆಗೂ ಸರಕಾರಕ್ಕೆ ಏನೂ ಆಗಲ್ಲ. ಸಿದ್ದರಾಮಯ್ಯ ಹಾಗೂ ನನ್ನ ನಡುವೆ ರಾಜಕೀಯಕ್ಕೂ ಮೀರಿದ ಸಂಬಂಧವಿದೆ. ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಕಾಡಾನೆ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಆನೆ ಕಾರಿಡಾರ್ ನಿರ್ಮಾಣ ಮಾಡಲು ಅಧಿವೇಶನದ ನಂತರ ಸಿಎಂ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಹೋಗಿ ಹಾಸನ ಸೇರಿ ರಾಜ್ಯದಲ್ಲಿರುವ ಆನೆ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ರೇವಣ್ಣ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *