ಬಡ ಮುಸ್ಲಿಮರ ಮೇಲೆ ಬಿಜೆಪಿ ಸಮರ ಸಾರಿದೆ: ಓವೈಸಿ ಕಿಡಿ

Public TV
1 Min Read

ನವದೆಹಲಿ: ದೆಹಲಿಯಲ್ಲಿ ಮನೆಗಳನ್ನು ಧ್ವಂಸಗೊಳಿಸುವ ಮೂಲಕ ಬಿಜೆಪಿ ಬಡವರ ವಿರುದ್ಧ ಸಮರ ಸಾರಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಬಿಜೆಪಿ ಬಡವರ ವಿರುದ್ಧ ಸಮರ ಸಾರಿದೆ. ಅತಿಕ್ರಮಣದ ಹೆಸರಿನಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತೆಯೇ ದೆಹಲಿಯಲ್ಲಿ ಮನೆಗಳನ್ನು ನಾಶಪಡಿಸಲು ಹೊರಟಿದೆ. ಯಾವುದೇ ನೋಟಿಸ್ ಇಲ್ಲ, ನ್ಯಾಯಾಲಯಕ್ಕೆ ಹೋಗಲು ಅವಕಾಶವಿಲ್ಲ. ಬದುಕಲು ಧೈರ್ಯಮಾಡಿದ ಬಡ ಮುಸ್ಲಿಮರನ್ನು ಶಿಕ್ಷಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬುಲ್ಡೋಜರ್‌ ಕಾರ್ಯಾಚರಣೆಗೆ ಸುಪ್ರೀಂ ಬ್ರೇಕ್‌

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಂಶಯಾಸ್ಪದ ಪಾತ್ರವನ್ನು ಸ್ಪಷ್ಟಪಡಿಸಬೇಕು. ಇದರಲ್ಲಿ ದೆಹಲಿಯ ಲೋಕೋಪಯೋಗಿ ಪಾತ್ರದ ಬಗ್ಗೆಯೂ ತಿಳಿಸಬೇಕು. ಇಂತಹ ದ್ರೋಹ ಮತ್ತು ಹೇಡಿತನಕ್ಕಾಗಿ ಜಹಿಂಗೀರ್‌ಪುರಿಯ ಜನರು ಎಎಪಿಗೆ ಮತ ಹಾಕಿದ್ದಾರೆಯೇ? ಪೊಲೀಸರು ನಮ್ಮ ನಿಯಂತ್ರಣದಲ್ಲಿಲ್ಲ ಎಂದು ಅವರು ಆಗಾಗ್ಗೆ ಹೇಳುವುದು ಇಲ್ಲಿ ಕೆಲಸಕ್ಕೆ ಬರುವುದಿಲ್ಲ ಎಂದು ಕೇಜ್ರಿವಾಲ್‌ ವಿರುದ್ಧವೂ ಗುಡುಗಿದ್ದಾರೆ.

ಉತ್ತರ ದೆಹಲಿ ಮುನ್ಸಿಪಲ್‌ ಕಾರ್ಪೊರೇಷನ್‌ ತೆರವು ಕಾರ್ಯಾಚರಣೆಗೆ ಪೊಲೀಸ್‌ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಕಾರ ಕೋರಿರುವ ಪತ್ರವನ್ನು ಓವೈಸಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಜೆಸಿಬಿ ಘರ್ಜನೆ- ಜಹಾಂಗೀರ್‌ಪುರಿಯಲ್ಲಿ ಅಕ್ರಮ ಆಸ್ತಿಗಳ ಧ್ವಂಸ

ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಬಿಜೆಪಿ ನೇತೃತ್ವದ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸಿದ ಕಾರ್ಯಾಚರಣೆಗೆ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದರೂ ಕ್ಯಾರೆ ಎನ್ನದೇ ಬುಲ್ಡೋಜರ್‌ಗಳು ಕಾರ್ಯಾಚರಣೆ ನಡೆಸಿವೆ.

Share This Article
Leave a Comment

Leave a Reply

Your email address will not be published. Required fields are marked *