ತಾಕತ್ತಿದ್ದರೆ RSS ನಿಷೇಧ ಮಾಡಿ ಚುನಾವಣೆಗೆ ಬನ್ನಿ: ಪ್ರಿಯಾಂಕ್‌ ಖರ್ಗೆಗೆ ಸುನಿಲ್‌ ಕುಮಾರ್‌ ಸವಾಲ್

Public TV
2 Min Read

ಉಡುಪಿ: ತಾಕತ್ತಿದ್ದರೆ ಆರ್‌ಎಸ್‌ಎಸ್‌ (RSS) ನಿಷೇಧ ಮಾಡಿ ಚುನಾವಣೆಗೆ ಬನ್ನಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆಗೆ ಮಾಜಿ ಸಚಿವ ಸುನಿಲ್‌ ಕುಮಾರ್‌ (Sunil Kumar) ಸವಾಲು ಹಾಕಿದರು.

ಸರ್ಕಾರದ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆಗಳನ್ನು ಬ್ಯಾನ್‌ ಮಾಡುವಂತೆ ಸಿಎಂಗೆ ಪ್ರಿಯಾಂಕ್‌ ಖರ್ಗೆ (Priyank Kharge) ಪತ್ರ ಬರೆದಿದ್ದಾರೆ. ಈ ಕುರಿತು ಮಾತನಾಡಿದ ಸುನಿಲ್‌ ಕುಮಾರ್‌, ಆರ್‌ಎಸ್‌ಎಸ್ ನಿಷೇಧ ಹೇಳಿಕೆ ನಾಚಿಕೆ ಸಂಗತಿ.‌ ಪ್ರಿಯಾಂಕ್ ಖರ್ಗೆ ಅವಿವೇಕಿತನದ ಪತ್ರ ಬರೆದಿದ್ದಾರೆ. ಇವರ ತಂದೆ ಗೃಹ ಸಚಿವರವಾಗಿದ್ದಾಗಲೇ ಆರ್‌ಎಸ್‌ಎಸ್ ಅನ್ನು ಏನೂ ಮಾಡಲು ಆಗಿಲ್ಲ. ಅಧಿಕಾರದ ಮದ, ಸೊಕ್ಕಿನಿಂದ ಈ ರೀತಿಯ ಹೇಳಿಕೆ ಕೊಡುತ್ತಿದ್ದೀರಿ. ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರಾಗಿ ಬರಬಹುದು ಪದೇ ಪದೇ ದುರಹಂಕಾರದಿಂದ ಮಾತನಾಡಬೇಡಿ. ಇದು ನಿಮ್ಮ ಬೆಳವಣಿಗೆಗೆ ಒಳ್ಳೆಯದಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಪ್ಪನಿಂದಲೇ RSS ಬ್ಯಾನ್ ಮಾಡಲು ಆಗ್ಲಿಲ್ಲ, ಇವರಿಂದ ಆಗುತ್ತಾ?: ಯತ್ನಾಳ್ ಟಾಂಗ್

ನೀವು, ನಿಮ್ಮ ಅಧಿಕಾರ ಶಾಶ್ವತ ಅಲ್ಲ. ಆರ್‌ಎಸ್‌ಎಸ್ ವಿಚಾರ ಮಾತ್ರ ಶಾಶ್ವತ. ನೂರು ವರ್ಷ ಜನರ ನಡುವೆ ಕೆಲಸ ಮಾಡಿದೆ. ಇನ್ನೂ ನೂರಾರು ವರ್ಷ ಕೆಲಸ ಮಾಡುತ್ತೆ. ನಮ್ಮಂತಹ ಲಕ್ಷಾಂತರ ಸ್ವಯಂ ಸೇವಕರು ಮುಂದಿನ ಪೀಳಿಗೆಯಲ್ಲೂ ಕೆಲಸ ಮಾಡುತ್ತಾರೆ. ಎರಡೂವರೆ ವರ್ಷ ಇಲಾಖೆಯಲ್ಲಿ ಕೇವಲ ಕತ್ತೆ ಕಾದಿದ್ದೀರಿ. ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ ಬಂದಾಗ ನಾಪತ್ತೆಯಾಗಿದ್ದೀರಿ. ನಾನು ಸಚಿವನಾಗಿ ಜೀವಂತನಾಗಿದ್ದೇನೆ ಎಂದು ತೋರಿಸಿಕೊಳ್ಳಲು ಹೇಳಿಕೆ ಕೊಡಬೇಡಿ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಕೆಟ್ಟ ಸರ್ಕಾರ ಇದೆ. ಮುಖ್ಯಮಂತ್ರಿಗಳಿಗೆ ಸಂಪುಟದಲ್ಲಿ ಹಿಡಿತ ಇಲ್ಲ. ಯಾರು ಏನು ಬೇಕಾದರೂ ಮಾತನಾಡಬಹುದೆಂಬ ಪರಿಸ್ಥಿತಿ ಇದೆ. ದಿನ ಬೆಳಗಾದರೆ ಯಾರು ಮುಖ್ಯಮಂತ್ರಿ, ಯಾರು ಸಚಿವ ಅನ್ನೋದೆ ಚರ್ಚೆ. ಇದು 80% ಸರ್ಕಾರ. ತಾಕತ್ತಿದ್ದರೆ ಆರ್‌ಎಸ್‌ಎಸ್ ನಿಷೇಧ ಮಾಡಿ‌ ಚುನಾವಣೆಗೆ ಬನ್ನಿ. ದೇಶಭಕ್ತ ಸಂಘಟನೆಯಾಗಿ ಆರ್‌ಎಸ್‌ಎಸ್ ವಿಶ್ವದ ಜನರ ಮನಸ್ಸು ಗೆದ್ದಿದೆ. ದೇಶಕ್ಕೆ ತನ್ನದೇ ಕೊಡುಗೆ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಎಲ್ಲಾ ಚಟುವಟಿಕೆ ಬ್ಯಾನ್‌?

ಆರ್‌ಎಸ್‌ಎಸ್ ಅನ್ನು ಪ್ರಿಯಾಂಕ ಖರ್ಗೆ ವಿನಾಕಾರಣ ಟೀಕೆ ಮಾಡುತ್ತಿರುವುದು ಮೊದಲಲ್ಲ. ತನ್ನ‌ ಅಧಿಕಾರ ಅವಧಿಯಲ್ಲಿ ಜನರಿಗೆ ಹತ್ತಿರವಾಗುವ ಯಾವುದೇ ಕೆಲಸ ಖರ್ಗೆ ಸಚಿವರಾಗಿ ಮಾಡಿಲ್ಲ. ಆರ್‌ಎಸ್‌ಎಸ್ ಟೀಕೆ ಮಾಡುವ ಮೂಲಕ ಜೀವಂತವಾಗಿದ್ದೇನೆ ಎಂದು ತೋರಿಸಲು ಹೊರಟಿದ್ದಾರೆ. ಇಡೀ ರಾಜ್ಯದಲ್ಲಿ ‌ಗ್ರಾಮೀಣ ಭಾಗದಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಈ ವೈಫಲ್ಯಕ್ಕೆ ಪ್ರಿಯಾಂಕ್‌ ಖರ್ಗೆ ಕಾರಣ. ಒಂದು ಹೊರ ರಸ್ತೆ ಮಾಡಿಲ್ಲ, ರಸ್ತೆ ಗುಂಡಿ ಮುಚ್ಚಿಲ್ಲ. ಒಂದೇ ಒಂದು ನಿವೇಶನ ಹಂಚಿಲ್ಲ. ಗ್ರಾಮ ಪಂಚಾಯಿತಿಗೆ ಅನುದಾನ ಕೊಟ್ಟಿಲ್ಲ. ಯಾವುದೇ ಜಿಲ್ಲೆಗೆ ಪ್ರವಾಸ ಮಾಡಿಲ್ಲ. ತನ್ನ ವೈಫಲ್ಯ ಮುಚ್ಚಿಹಾಕಲು ಮಾಧ್ಯಮದ ಮುಂದೆ ಮಾತನಾಡುವ ಚಟ ಎಂದು ಟಾಂಗ್‌ ಕೊಟ್ಟರು.

Share This Article