ಪ.ಬಂಗಾಳ ಬದುಕಲು ಯೋಗ್ಯವಾಗಿಲ್ಲ – ಬಿರ್ಭೂಮ್ ಹಿಂಸಾಚಾರ ನೆನೆದು ಕಣ್ಣೀರಿಟ್ಟ ಸಂಸದೆ ರೂಪಾ ಗಂಗೂಲಿ

Public TV
2 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಕೆಲದಿನಗಳ ಹಿಂದೆ ನಡೆದ ಹಿಂಸಾಚಾರ ಪ್ರಕರಣ ರಾಜ್ಯ ಸಭೆಯಲ್ಲಿ ಪ್ರತಿಧ್ವನಿಸಿದೆ. ಪಶ್ಚಿಮ ಬಂಗಾಳ ರಾಜ್ಯ ಬದುಕಲು ಯೋಗ್ಯವಾಗಿಲ್ಲ. ಇದೊಂದು ಸಾಮೂಹಿಕ ಹತ್ಯಾ ಪ್ರಕರಣ ಎಂದು ಬಿಜೆಪಿ ಸಂಸದೆ ರೂಪಾ ಗಂಗೂಲಿ ಕಣ್ಣೀರಿಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಮತ್ತು ಆರು ಮಂದಿ ಮಹಿಳೆಯರನ್ನು ಜೀವಂತ ಸುಟ್ಟ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು. ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ರೂಪಾ ಗಂಗೂಲಿ, ಪಶ್ಚಿಮ ಬಂಗಾಳ ರಾಜ್ಯವು ಬದುಕಲು ಯೋಗ್ಯವಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಜನರು ಸರ್ಕಾರದ ವಿರುದ್ಧ ಮಾತನಾಡುವ ಹಾಗೆ ಇಲ್ಲ. ಸರ್ಕಾರವು ಕೊಲೆಗಡುಕರನ್ನು ರಕ್ಷಿಸುತ್ತಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಸರ್ಕಾರವೊಂದು ಜನರನ್ನು ಸಾಯಿಸುವಂತಹ ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲಿ ಹೊರತು ಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ. ನಾವೆಲ್ಲರೂ ಮನುಷ್ಯ ಜೀವಿಗಳು. ನಾವು ಕಲ್ಲು ಹೃದಯದ ರಾಜಕಾರಣ ಮಾಡಲು ಸಾಧ್ಯವಿಲ್ಲ. ಅಲ್ಲಿ ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ. ಅಲ್ಲಿನ ಜನರು ಊರುಗಳಿಂದ ಪರಾರಿಯಾಗುತ್ತಿದ್ದಾರೆ. ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಮನವಿ ಮಾಡಿಕೊಂಡು ಭಾವುಕರಾದರು. ಸಂಸದೆಯ ಈ ಹೇಳಿಕೆಯಿಂದ ರಾಜ್ಯಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು. ಇದನ್ನೂ ಓದಿ: ಟಿಎಂಸಿ ನಾಯಕನನ್ನು ಅರೆಸ್ಟ್ ಮಾಡುವಂತೆ ಮಮತಾ ಬ್ಯಾನರ್ಜಿ ಆದೇಶ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್ ಸಿಬಿಐ ತನಿಖೆಗೆ ಒಪ್ಪಿಸಿದೆ. ಕೇಂದ್ರ ತನಿಖಾ ಸಂಸ್ಥೆಗೆ ಪ್ರಕರಣ ಹಸ್ತಾಂತರ ಮಾಡಬಾರದು ಎಂಬ ಮಮತಾ ಬ್ಯಾನರ್ಜಿ ಸರ್ಕಾರದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಏನಿದು ಪ್ರಕರಣ
ಪಶ್ಚಿಮ ಬಂಗಾಳದ ಬಗುಟಿ ಗ್ರಾಮ ಪಂಚಾಯತ್ ಮುಖಂಡ ಭಾದು ಶೇಖ್ ಅವರ ಮೇಲೆ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು 10 ರಿಂದ 12 ಮನೆಗೆ ಬೆಂಕಿ ಹಚ್ಚಿದ್ದರು. ಇದನ್ನೂ ಓದಿ: ಇನ್ಮುಂದೆ ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ: ಪಂಜಾಬ್ ಸಿಎಂ

ಇದರಿಂದಾಗಿ 8 ಮಂದಿ ಸಜೀವ ದಹನವಾಗಿದ್ದರು. ಇದರಲ್ಲಿ ಇಬ್ಬರು ಮಕ್ಕಳೂ ಸಹ ಇದ್ದರು ಎಂಬುದಾಗಿ ಬಿರ್ಭೂಮ್ ಎಸ್‍ಪಿ ನಾಗೇಂದ್ರ ತ್ರಿಪಾಟಿ ಮಾಹಿತಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಸ್ವಯಂಪ್ರೇರಿತವಾಗಿಯೇ ವಿಚಾರಣೆ ನಡೆಸಲು ಮುಂದಾಗಿತ್ತು. ಈ ನಡುವೆ ಜಿಲ್ಲೆಯ ಕೆಲ ಕುಟುಂಬಗಳು ಹಿಂಸಾಚಾರಕ್ಕೆ ಬೆಚ್ಚಿಬಿದ್ದಿದ್ದು, ತಮ್ಮ ಮನೆಗಳನ್ನು ತೊರೆದು ಹೋಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *