ಕುಮಾರಸ್ವಾಮಿ ಹೀಗೆ ಮಾತನಾಡಿದ್ರೆ ಹಿಟ್ ವಿಕೆಟ್ ಆಗ್ತೀರಾ: ಆರ್.ಅಶೋಕ್ ತಿರುಗೇಟು

Public TV
3 Min Read

ಬೆಂಗಳೂರು: ಕುಮಾರಸ್ವಾಮಿ ಯಾವಾಗ ಯಾರ ಪರ ಬ್ಯಾಟಿಂಗ್ ಮಾಡುತ್ತಾರೋ ಗೊತ್ತಾಗುವುದಿಲ್ಲ. ಹೀಗೆ ಮಾತನಾಡಿದರೆ ಹಿಟ್ ವಿಕೆಟ್ ಆಗುತ್ತೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕಂದಾಯ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

KUMARASWAMY

ಸರ್ಕಾರಿ ಶಾಲೆಗಳ ಆಸ್ತಿಯ ಖಾತೆಗಳನ್ನ ಎಸ್‍ಡಿಎಂಸಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರ್.ಅಶೋಕ್ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕುಮಾರಸ್ವಾಮಿ ಯಾವಾಗ ಯಾರ ಪರ ಬ್ಯಾಟಿಂಗ್ ಮಾಡುತ್ತಾರೋ ಗೊತ್ತಾಗುವುದಿಲ್ಲ. ಹೇಗೆ ತಿರುಗಿ ಬೇಕಾದರೂ ಬ್ಯಾಟಿಂಗ್ ಮಾಡುತ್ತಾರೆ. ಉಲ್ಟಾ- ಸೀದಾ ಬ್ಯಾಟಿಂಗ್ ಕೂಡಾ ಮಾಡುತ್ತಾರೆ. ಕುಮಾರಸ್ವಾಮಿ ಹೀಗೆ ಬ್ಯಾಟಿಂಗ್ ಮಾಡಿದಾಗ ಹಿಟ್ ವಿಕೆಟ್ ಆಗಿರುವುದೇ ಜಾಸ್ತಿ. ಕುಮಾರಸ್ವಾಮಿ ಅವರು ಹೀಗೆ ಮಾತನಾಡಿದರೆ ಹಿಟ್ ವಿಕೆಟ್ ಆಗುತ್ತೀರಾ ಹೀಗೆಲ್ಲಾ ಮಾತನಾಡಬೇಡಿ. 2006ರಲ್ಲಿ ನಮ್ಮ ಜೊತೆ ಸರ್ಕಾರ ಮಾಡಿದ್ದರು. 2018ರಲ್ಲಿ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದರು. ಆಡು ಮುಟ್ಟದ ಸೊಪ್ಪಿಲ್ಲ, ಜೆಡಿಎಸ್ ಮುಟ್ಟದ ಪಕ್ಷ ಇಲ್ಲ ಎನ್ನುವ ಹಾಗೇ ಆಗಿದೆ ಜೆಡಿಎಸ್ ಪರಿಸ್ಥಿತಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನಸುಕಿನಲ್ಲಿ ಸುಪ್ರಭಾತ, ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ, ಇಂದಿನದಲ್ಲ: ಕುಮಾರಸ್ವಾಮಿ

ರಾಜ್ಯದಲ್ಲಿ ಅಜಾನ್ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಯಾವುದೇ ಹೊಸ ಕಾನೂನು ಮಾಡಿಲ್ಲ. ಸ್ಪೀಕರ್ ಹಾಕುವ ವಿಚಾರದಲ್ಲಿ ಹೈಕೋರ್ಟ್ ಅನೇಕ ತೀರ್ಪು ಕೊಟ್ಟಿದೆ. ಎಷ್ಟು ಸೌಂಡ್ ಇರಬೇಕು ಅಂತ ಕೋರ್ಟ್ ಹತ್ತಾರು ಬಾರಿ ಆದೇಶಿಸಿದೆ. ಅದರ ಪ್ರಕಾರ ಮಸೀದಿಗಳು ನಿಯಮ ಪಾಲನೆ ಮಾಡಬೇಕು. ಮೈಕ್ ಹಾಕುವ ವಿಚಾರದಲ್ಲಿ ಎಲ್ಲಾ ಧರ್ಮಗಳು ಕೋರ್ಟ್ ಆದೇಶ ಪಾಲನೆ ಮಾಡಬೇಕು. ಕೋರ್ಟ್ ಆದೇಶ ಪಾಲನೆ ಮಾಡಬೇಕು ಎನ್ನುವುದು ಸರ್ಕಾರದ ಸ್ಪಷ್ಟ ನಿಲುವು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

ಕಿಡಿಗೇಡಿಗಳಿಗೆ ಪಾಠ
ಎಲ್ಲಿ ಉತ್ತಮವಾದ ಆಹಾರ ಸಿಗುತ್ತದೆ ಅಲ್ಲಿ ಜನ ಹೋಗುತ್ತಾರೆ. ಎಲ್ಲಿ ಇಷ್ಟವೋ ಅಲ್ಲಿ ಮಾಂಸ ತೆಗೆದುಕೊಳ್ಳುತ್ತಾರೆ. ಹೊಸ ತೊಡಕಿನಲ್ಲಿ ಕಿಡಿಗೇಡಿಗಳಿಗೆ ಪಾಠ ಕಲಿಸಿದ್ದಾರೆ. ಯಾರು ಬಲತ್ಕಾರವಾಗಿ ತಿನ್ನಿ ಅಂತ ಹೇಳುವ ಹಾಗೆ ಇಲ್ಲ. ಇದನ್ನು ಸರ್ಕಾರ ಸಹಿಸುವುದಿಲ್ಲ. ಮಾಂಸ ತಿನ್ನುವುದು ಅವರ ಇಷ್ಟ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿ

ಧ್ವನಿ ಎತ್ತಲಿಲ್ಲ ಯಾಕೆ?
ಹಿಜಬ್ ವಿಷಯ ತಂದಿದ್ದು ಯಾರು? 6 ಜನ ಹೆಣ್ಣು ಮಕ್ಕಳು ಹಿಜಬ್ ವಿಷಯ ತಂದರು. ಇದರಿಂದ ದೊಡ್ಡ ಸಂಚು, ಗ್ಯಾಂಗ್ ಇದೆ. ಅವರು ಈ ವಿಚಾರಗಳನ್ನು ತರುತ್ತಿದ್ದಾರೆ. ಇಂತಹ ವಿಷಯಗಳಿಗೆ ಪೋಷಣೆ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಹಿಜಬ್ ವಿಷಯ ಬಂದಾಗ ಕಾಂಗ್ರೆಸ್ ಯಾಕೆ ಬಾಯಿ ಮುಚ್ಚಿ ಕುಳಿತಿತ್ತು. ವಿಧಾನಸಭೆಯಲ್ಲಿ ಧ್ವನಿ ಎತ್ತಲಿಲ್ಲ ಯಾಕೆ? ಹೈಕೋರ್ಟ್ ಆದೇಶದ ವಿರುದ್ಧ ಬಂದ್ ಮಾಡಿದ್ದರು. ಯಾವ ಕಾಂಗ್ರೆಸ್ ನಾಯಕರು ಇದರ ಬಗ್ಗೆ ಮಾತನಾಡಿಲ್ಲ. ಧರ್ಮಗುರುಗಳ ಜೊತೆ ಚರ್ಚೆ ಮಾಡಿ ಕೋರ್ಟ್ ಆದೇಶ ಪಾಲಿಸಿ ಅಂತ ಯಾಕೆ ಹೇಳಲಿಲ್ಲ. ವೋಟ್ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್. ಉತ್ತರ ಪ್ರದೇಶದಲ್ಲಿ ನಾವು ಅಭಿವೃದ್ಧಿ ಹೆಸರಿನಲ್ಲಿ ಗೆದ್ದಿದ್ದೇವೆ. ಅಲ್ಪಸಂಖ್ಯಾತ ಓಲೈಕೆ ಮಾಡಿಲ್ಲ. ಆದರೆ ಕಾಂಗ್ರೆಸ್‍ಗೆ ಯಾರು ಓಟ್ ಹಾಕಿಲ್ಲ. ಹಿಜಬ್ ಬಗ್ಗೆ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ ಎಂದು ಕಿಡಿಕಾರಿದ್ದಾರೆ.

ಡಿಕೆಶಿ ಒಂದು ಹೇಳಿಕೆ ಕೊಟ್ಟರೆ, ಸಿದ್ದರಾಮಯ್ಯ ಮತ್ತೊಂದು ಹೇಳಿಕೆ ಕೊಡುತ್ತಾರೆ. ಮೊದಲು ಹಿಜಬ್ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಹೇಳಲಿ. ಕಾಂಗ್ರೆಸ್‍ಗೆ ಬೇಕಾಗಿರುವುದು ಗಲಭೆಗಳು ಮಾತ್ರ. ಸರ್ಕಾರ ಇಂತಹ ಗಲಭೆಗಳಿಗೆ ಅವಕಾಶ ಕೊಡುವುದಿಲ್ಲ. ಗಲಭೆಗಳನ್ನು ಸರ್ಕಾರ ಮಟ್ಟ ಹಾಕುತ್ತಿವೆ. ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ರೀತಿ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *