ಮಹಾರಾಷ್ಟ್ರದಲ್ಲಿ ಬಿಜೆಪಿ ಜಯಭೇರಿ – ಬೆಂಗಳೂರಲ್ಲಿ ವಿಜಯೋತ್ಸವ ಆಚರಣೆ

2 Min Read

ಬೆಂಗಳೂರು: ಮಹಾರಾಷ್ಟ್ರದ (Maharashtra) ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಜಯಭೇರಿಯ ಹಿನ್ನೆಲೆ ಬೆಂಗಳೂರಿನ ರಾಜ್ಯ ಬಿಜೆಪಿ (BJP) ಕಚೇರಿಯ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಮುಂಬೈಯಲ್ಲಿ ಅತಿ ದೊಡ್ಡ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷವು ಭಾರೀ ಮುನ್ನಡೆ ಸಾಧಿಸಿದೆ. ಇದು ಸಂತಸದ ವಿಚಾರ. ಕಾಂಗ್ರೆಸ್‌ನವರು ಮತಪತ್ರದಲ್ಲಿ ಚುನಾವಣೆ ಮಾಡಿದರೆ ಗೆಲ್ಲುವುದಾಗಿ ಹೇಳುತ್ತಿದ್ದರು. ಅದರಲ್ಲೂ ನಮ್ಮ ರಾಜ್ಯದಲ್ಲಿ ಸೋತಿದ್ದಾರೆ. ಈಗ ಮತ್ತೆ ಇವಿಎಂ ಹ್ಯಾಕ್ ಆಗಿದೆ ಎನ್ನಲಿದ್ದಾರೆ ಎಂದು ವ್ಯಂಗ್ಯವಾಡಿದರು. 30 ವರ್ಷಗಳ ನಂತರ ಬಿಜೆಪಿ ಮೇಯರ್ ಚುಕ್ಕಾಣಿ ಹಿಡಿಯುವುದು ಅತ್ಯಂತ ಖುಷಿ ತಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭರತ್‌ ರೆಡ್ಡಿ ಆಪ್ತನ ಇಬ್ಬರು ಗನ್‌ಮ್ಯಾನ್‌ಗಳು ಅರೆಸ್ಟ್ – ಶನಿವಾರ ಬಳ್ಳಾರಿಯಲ್ಲಿ ರೆಡ್ಡಿ, ರಾಮುಲು ಪವರ್‌ಶೋ

ಕೇರಳದ ತಿರುವನಂತಪುರದಲ್ಲೂ ನಾವು ಗೆದ್ದಿದ್ದೇವೆ. ನರೇಂದ್ರ ಮೋದಿ ಜೀ ಅವರು ಮಾಡುವ ಕೆಲಸವೇ ಇದಕ್ಕೆ ಕಾರಣ. ಬಿಜೆಪಿಗೆ ಪರ್ಯಾಯ ಯಾವುದೂ ಇಲ್ಲವೆಂದು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮುಂಬೈ ಜನತೆಯನ್ನು ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ, ನಾಯಕರನ್ನು ಅಭಿನಂದಿಸಿದರು.

ಬೆAಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಪ್ತಗಿರಿಗೌಡ ಅವರು ಮಾತನಾಡಿ, ರಾಷ್ಟ್ರದ ಅತ್ಯಂತ ಶ್ರೀಮಂತ ನಗರಪಾಲಿಕೆ ಬೃಹನ್ಮುಂಬೈಯಲ್ಲಿ ಬಿಜೆಪಿ ಮಿತ್ರಕೂಟ ಗೆದ್ದಿದೆ. ಮುಂಬೈ ಜನತೆ ನಿಜವಾದ ಶಿವಸೇನೆ ಯಾರೆಂದು ತೋರಿಸಿದ್ದಾರೆ. ಅಲ್ಲಿ ಶಿವಸೇನೆ ಹೆಸರಿನಲ್ಲಿ ಬಹಳ ಬೂಟಾಟಿಕೆ ನಡೆಯುತ್ತಿತ್ತು. ನಮ್ಮ ಮೇಲೆ ಠಾಕ್ರೆಯವರ ಕುಟುಂಬ ಮಾಡಿದ ಆರೋಪಗಳೆಲ್ಲವನ್ನೂ ಬದಿಗೊತ್ತಿ ನಿಜವಾದ ಶಿವಸೇನೆ ಯಾವುದು, ರಾಷ್ಟ್ರಕ್ಕೆ ಮುಂಚೂಣಿಯಲ್ಲಿ ಯಾರು ನಡೆಸಿಕೊಂಡು ಹೋಗಬೇಕೆಂದು ಜನ ತೀರ್ಮಾನ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ನೈಜ ಗೆಲುವು ಎಂದು ಹೇಳಿ, ಕಾರ್ಯಕರ್ತರು ಮತ್ತು ನಾಯಕರಿಗೆ ಅಭಿನಂದನೆ ಸಲ್ಲಿಸಿದರು.

ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಅವರು ಮಾತನಾಡಿ, ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ದ್ವೇಷಪೂರಿತ ಪ್ರಚಾರ ಮಾಡಿದ್ದರು. ಮುಂಬೈನ ಪ್ರಬುದ್ಧ ಮತದಾರರು ಅವರಿಬ್ಬರಿಗೂ ಕಪಾಳಮೋಕ್ಷ ಮಾಡಿ, ಬಿಜೆಪಿಗೆ ಅಭೂತಪೂರ್ವ ಜಯ ತಂದುಕೊಟ್ಟಿದ್ದಾರೆ ಎಂದು ತಿಳಿಸಿದರು. ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ್, ಬೆಂಗಳೂರು ಉತ್ತರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಭಾನು ರಂಗಸ್ವಾಮಿ, ಪ್ರಮುಖರಾದ ಗಂಗಹನುಮಯ್ಯ, ಮುಖಂಡರು, ಪಾಲಿಕೆಯ ಮಾಜಿ ಸದಸ್ಯರು, ಕಾರ್ಯಕರ್ತರು ಇದ್ದರು.ಇದನ್ನೂ ಓದಿ: ಜ.20ಕ್ಕೆ ಬಿಜೆಪಿಗೆ ಹೊಸ ಅಧ್ಯಕ್ಷ

Share This Article