ತೆಲಂಗಾಣ ಫೈರ್ ಬ್ರಾಂಡ್ ಟಿ.ರಾಜಾ ಸಿಂಗ್ ರಾಜೀನಾಮೆ ಅಂಗೀಕರಿಸಿದ ಬಿಜೆಪಿ

Public TV
1 Min Read

– ರಾಜೀನಾಮೆಗೆ ನೀಡಿದ್ದ ಕಾರಣಗಳನ್ನು ತಿರಸ್ಕರಿಸಿದ ನಡ್ಡಾ

ಹೈದರಾಬಾದ್: ತೆಲಂಗಾಣ (Telangana) ಶಾಸಕ ರಾಜಾ ಸಿಂಗ್ (Raja Singh) ಅವರ ರಾಜೀನಾಮೆಯನ್ನು ಬಿಜೆಪಿ (BJP) ಅಂಗೀಕರಿಸಿದೆ. ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಲಾದ ಕಾರಣಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿರಸ್ಕರಿಸಿದ್ದಾರೆ.

ತೆಲಂಗಾಣ ಶಾಸಕ ಟಿ. ರಾಜಾ ಸಿಂಗ್ ಅವರು ಜೂ.30 ರಂದು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರ ರಾಜೀನಾಮೆಯನ್ನು ಬಿಜೆಪಿ ಅಂಗೀಕರಿಸಿದೆ. ರಾಜೀನಾಮೆ ಪತ್ರದಲ್ಲಿ ಶಾಸಕ ಉಲ್ಲೇಖಿಸಿದ್ದ ಕಾರಣಗಳನ್ನು ಬಿಜೆಪಿ ತಿರಸ್ಕರಿಸಿದೆ. ಇದನ್ನೂ ಓದಿ: ತೆಲಂಗಾಣ | ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಸಿಗದ ಅವಕಾಶ – ಬಿಜೆಪಿಗೆ ಶಾಸಕ ರಾಜಾ ಸಿಂಗ್ ಗುಡ್‌ ಬೈ

ರಾಜಾ ಸಿಂಗ್ ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರ ರಾಜೀನಾಮೆ ತೆಲಂಗಾಣ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಚೋದನಾತ್ಮಕ ಭಾಷಣಗಳಿಂದ ಅವರು ಆಗಾಗ ಸುದ್ದಿಯಾಗುತ್ತಿದ್ದರು.

ರಾಜೀನಾಮೆ ಪತ್ರದಲ್ಲಿ, ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ಎನ್ ರಾಮಚಂದ್ರ ರಾವ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ರಾವ್ ಅವರನ್ನು ನೇಮಕ ಮಾಡಲಾಗುವುದು ಎಂದು ಮಾಧ್ಯಮ ವರದಿಗಳಿಂದ ತಿಳಿದುಕೊಂಡಿದ್ದೇನೆ. ಈ ನಿರ್ಧಾರ ನನಗೆ ಮಾತ್ರವಲ್ಲ, ಪಕ್ಷದ ಜೊತೆ ಇರುವ ಲಕ್ಷಾಂತರ ಕಾರ್ಯಕರ್ತರು, ನಾಯಕರು ಮತ್ತು ಮತದಾರರಿಗೆ ನಿರಾಶೆಯನ್ನುಂಟು ಮಾಡಿದೆ ಎಂದು ಬರೆದಿದ್ದರು.

ರಾಜೀನಾಮೆ ಸಲ್ಲಿಸಿದ ಬಳಿಕ ಮಾತಾಡಿದ್ದ ರಾಜಾಸಿಂಗ್‌, ‘ರಾಮಚಂದ್ರ ರಾವ್ ಅವರಿಗೆ ಪಕ್ಷದ ಅಧಿಕಾರ ಹಸ್ತಾಂತರದಿಂದ ನನಗೆ ತೀವ್ರ ಬೇಸರವಿದೆ. ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಲು ಬಯಸಿದ್ದೆ. ಆದರೆ, ನನ್ನ ಬೆಂಬಲಿಗರಿಗೆ ಬೆದರಿಕೆ ಹಾಕಲಾಯಿತು. ನಾನು ನಾಮಪತ್ರ ಸಲ್ಲಿಸಲು ಬಂದಾಗ ನನಗೆ ಅವಕಾಶ ನೀಡಲಿಲ್ಲ. ಅವರು ತಮಗೆ ಬೇಕಾದ ಜನರಿಗೆ ಹುದ್ದೆಯನ್ನು ನೀಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದರು. ಇದನ್ನೂ ಓದಿ: ಸರ್ಕಾರವೇ ಎಲ್ಲವನ್ನೂ ಮಾಡುವುದು ಕಷ್ಟವಾಗಬಹುದು: ಶರಣಪ್ರಕಾಶ್ ಪಾಟೀಲ್‌

Share This Article