ಬೆಂಗಳೂರು- ಮೈಸೂರು ಪಾದಯಾತ್ರೆ, ಹೋರಾಟಕ್ಕೆ ಮೊದಲ ಜಯ – ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ: ವಿಜಯೇಂದ್ರ

Public TV
3 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಜ್ಯ ಹೈಕೋರ್ಟಿನ ತೀರ್ಪನ್ನು ಗೌರವಿಸಿ ಗೌರವಯುತವಾಗಿ ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಅವರು ಆಗ್ರಹಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ (BJP Office) ಜಗನ್ನಾಥ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅವಕಾಶ ಕೊಟ್ಟಿದ್ದ ಮಾನ್ಯ ರಾಜ್ಯಪಾಲರ ಕ್ರಮವನ್ನು ರಾಜ್ಯ ಹೈಕೋರ್ಟ್ (Karnataka Highcourt) ಎತ್ತಿ ಹಿಡಿದಿದೆ. ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದ್ದಾರೆ. ಕಾನೂನಿನ ಎದುರು ಎಲ್ಲರೂ ಒಂದೇ ಎಂದು ಹೈಕೋರ್ಟ್ ತಿಳಿಸಿದೆ ಎಂದು ವಿಜಯೇಂದ್ರ ವಿಶ್ಲೇಷಿಸಿದರು. ಇದನ್ನೂ ಓದಿ: ಸಿಎಂ ಸಲ್ಲಿಸಿದ್ದ ರಿಟ್‌ ಅರ್ಜಿ ವಜಾ – ರಾಜ್ಯಪಾಲರ ಪ್ರಾಸಿಕ್ಯೂಷನ್‌ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಹೈಕೋರ್ಟ್‍ನಲ್ಲಿ ಸುದೀರ್ಘ ವಾದ, ಪ್ರತಿವಾದದ ಬಳಿಕ ಈ ತೀರ್ಪು ಹೊರಬಿದ್ದಿದೆ. ಗೌರವಾನ್ವಿತ ರಾಜ್ಯಪಾಲರು ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟಿದ್ದರು. ಕಾಂಗ್ರೆಸ್ಸಿಗರು ಗೌರವಾನ್ವಿತ ರಾಜ್ಯಪಾಲರು, ರಾಜಭವನವನ್ನು ಕೇಂದ್ರದ ಏಜೆಂಟ್ ಎಂದು ಆಕ್ಷೇಪಿಸಿದ್ದರು ಎಂದು ಟೀಕಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು, ಕೊಡದಿದ್ದರೆ ರಾಷ್ಟ್ರಮಟ್ಟದಲ್ಲಿ ಹೋರಾಟ ಗ್ಯಾರಂಟಿ: ಛಲವಾದಿ

ಕಳೆದ ಕೆಲವು ತಿಂಗಳಿನಿಂದ ಬಿಜೆಪಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿದ್ದೆವು. ನಂತರ ಸ್ವತಃ ಸಿಎಂ ಕುಟುಂಬವೇ ಫಲಾನುಭವಿಗಳಾಗಿರುವ ಮೈಸೂರಿನ ಮುಡಾ ಹಗರಣ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದೆವು. ಬೆಂಗಳೂರು- ಮೈಸೂರು ಪಾದಯಾತ್ರೆಯನ್ನು ನಡೆಸಿ ಬಿಜೆಪಿ- ಜೆಡಿಎಸ್ ಒಟ್ಟಾಗಿ ಯಶಸ್ವಿ ಹೋರಾಟ ಮಾಡಿದ್ದಾಗಿ ವಿಜಯೇಂದ್ರ ವಿವರಿಸಿದರು. ಇದನ್ನೂ ಓದಿ: ತಿರುಪತಿ ಲಡ್ಡಿನಲ್ಲಿ ಪ್ರಾಣಿ ಕೊಬ್ಬು ಮಿಶ್ರಣ ಆರೋಪ – ಸರ್ಕಾರಕ್ಕೆ 40 ಪುಟಗಳ ವರದಿ ಸಲ್ಲಿಸಿದ ಟಿಟಿಡಿ

ಗೌರವಾನ್ವಿತ ರಾಜ್ಯಪಾಲರಿಗೆ ಅನೇಕ RTI ಕಾರ್ಯಕರ್ತರು ಖಾಸಗಿ ದೂರು ನೀಡಿದ್ದರು. ಸೂಕ್ತ ತನಿಖೆ ನಡೆಸಲು ಒತ್ತಾಯಿಸಿದ್ದರು ಎಂದು ಅವರು ತಿಳಿಸಿದರು. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು ಎಂದ ಅವರು, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಭ್ರಷ್ಟಾಚಾರದ ಕಳಂಕ ಹೊತ್ತ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ವಿಶ್ವಾಸ ಇದೆ. ಅವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಮುಡಾ ವಿಚಾರದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಳಿಕ ರಾಜಭವನ, ರಾಜ್ಯಪಾಲರ ವಿರುದ್ಧ ತೇಜೋವಧೆ ಮಾಡಿದ್ದರು. ಈಗ ಹೈಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಆದ್ದರಿಂದ ಸಿಎಂ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹವನ್ನು ಮುಂದಿಟ್ಟರು. ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ ಎಂದೂ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಪಕ್ಷದ ಮುಂದಿನ ನಡೆಯ ಕುರಿತು ಪ್ರಮುಖರು, ಹಿರಿಯರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ವಿಜಯೇಂದ್ರ ಉತ್ತರ ನೀಡಿದರು.

Share This Article