ಬಿ.ಎಸ್.ವೈ ಆಸ್ಪತ್ರೆಗೆ ದಾಖಲು – ಎಲ್ಲ ವಿಚಾರವೂ ಗುಪ್ತ್ ಗುಪ್ತ್!

Public TV
2 Min Read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಯಡಿಯೂರಪ್ಪ ಆಪ್ತರು ಹಾಗೂ ಆಸ್ಪತ್ರೆ ಅಧಿಕೃತರು ಮಾತ್ರ ಯಡಿಯೂರಪ್ಪ ಅವರಿಗೆ ಏನೂ ಆಗಿಲ್ಲ, ಅವರನ್ನು ಈಗಾಗಲೇ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರು ಸದಾ ಓಡಾಡುವ ಫಾರ್ಚೂನರ್ ಕಾರು ಮಾತ್ರ ಇನ್ನೂ ಆಸ್ಪತ್ರೆಯಲ್ಲೇ ಇದೆ.

ಏನಾಗಿದೆ?: ಪಬ್ಲಿಕ್ ಟಿವಿಗೆ ಸಿಕ್ಕಿರುವ ಖಚಿತ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಜ್ವರದಿಂದ ಯಡಿಯೂರಪ್ಪ ಬಳಲುತ್ತಿದ್ದಾರೆ. ಅವರಿಗೆ ಡಾ. ಪ್ರಮೋದ್ ಹಾಗೂ ಡಾ.ಜಯಚಂದ್ರ ನೇತೃತ್ವದಲ್ಲಿ ಚಿಕಿತ್ಸೆ ಮುಂದುವರೆದಿದೆ. ನಿನ್ನೆ ರಾತ್ರಿ 9 ಗಂಟೆಗೆ ಬಿಎಸ್‍ವೈ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ.

ಯಡಿಯೂರಪ್ಪ ಆಪ್ತರು ಹಾಗೂ ಬಿಜೆಪಿ ನಾಯಕರು ಮಾತ್ರ ಅನಾರೋಗ್ಯ ವಿಚಾರ ಹೈಡ್ ಮಾಡುತ್ತಿದ್ದಾರೆ. ಆಸ್ಪತ್ರೆ ಹಾಗೂ ಬಿಜೆಪಿ ಮೂಲಗಳು ಯಡಿಯೂರಪ್ಪ ಅವರು ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ ಎನ್ನುತ್ತಿದ್ದಾರೆ. ಆದರೆ ಯಡಿಯೂರಪ್ಪ ಪಾರ್ಚುನರ್ ಗಾಡಿ ಆಸ್ಪತ್ರೆಯಲ್ಲಿಯೇ ಇದೆ. ಇದ್ರಿಂದ ಯಡಿಯೂರಪ್ಪ ಆಸ್ಪತ್ರೆಯಿಂದ ಇನ್ನು ಡಿಸ್‍ಜಾರ್ಜ್ ಆಗಿಲ್ಲ ಅನ್ನೋದು ಖಚಿತವಾಗಿದೆ. ನಮ್ಮ ಪ್ರತಿನಿಧಿಗೆ ಸಿಕ್ಕಿರುವ ಮಾಹಿತಿಯಂತೆ ಯಡಿಯೂರಪ್ಪನವರಿಗೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸಂಜೆಯವರೆಗೂ ಅಬ್ಸರ್ವೇಷನ್ ನಲ್ಲಿರುವಂತೆ ಸೂಚಿಸಿದ್ದಾರೆ. ಇಂದು ಬೆಳಿಗ್ಗೆ ಡಿಸ್ಚಾರ್ಜ್ ಮಾಡುವಂತೆ ಬಿಎಸ್‍ವೈ ಮನವಿ ಮಾಡಿದ್ದಾರೆ. ಆದ್ರೆ ಸಂಜೆಯವರೆಗೂ ಆಸ್ಪತ್ರೆಯಲ್ಲೇ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಕಳೆದ ಭಾನುವಾರವೂ ಬಿಎಸ್‍ವೈ ಆಸ್ಪತ್ರೆಗೆ ಆಡ್ಮಿಟ್ ಆಗಿದ್ರು. ಬಳಿಕ ಸೋಮವಾರ ಮತ್ತೆ ಡಿಸ್ ಜಾರ್ಜ್ ಆಗಿದ್ದಾರೆ. ನಿನ್ನೆ ರಾತ್ರಿ ಮತ್ತೆ ಆಡ್ಮಿಟ್ ಆಗಿದ್ದಾರೆ. ಡಾ.ಜಯಚಂದ್ರ ಟ್ರೀಟ್‍ಮೆಂಟ್ ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಆದ್ರೂ ವೈದ್ಯರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಸದ್ಯ ಇದೇ ಆಸ್ಪತ್ರೆಯ ಬೇರೆ ವಿಭಾಗದವರನ್ನು ಸಂಪರ್ಕಿಸಿದಾಗ ಅವರು ನೀಡಿದ ಮಾಹಿತಿಯೇ ಬೇರೆ. ಅವರ ಮಾಹಿತಿ ಪ್ರಕಾರ ಯಡಿಯೂರಪ್ಪ ಇಲ್ಲಿಯೇ ಟ್ರೀಟ್‍ಮೆಂಟ್ ತೆಗೆದುಕೊಳ್ತಾರೆ. ಅವರಿಗೆ ಡಯಾಬಿಟಿಸ್ ಇದ್ದು ಪ್ರತಿ ಬಾರಿಯೂ ಟ್ರೀಟ್‍ಮೆಂಟ್ ಸರಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲ. ವಯೋಸಹಜ ಸಮಸ್ಯೆಯಿಂದ ಯಡಿಯೂರಪ್ಪ ಬಳಲುತ್ತಿದ್ದು ಇತ್ತೀಚೆಗೆ ಸಾಕಷ್ಟು ಬಾರಿ ಅಡ್ಮಿಟ್ ಆಗುತ್ತಿದ್ರು. ಮುಖ್ಯ ವಾಗಿ ಮಧುಮೇಹದ ಸಮಸ್ಯೆಯೇ ಅವರನ್ನು ಹೆಚ್ಚಾಗಿ ಕಾಡುತ್ತಿತ್ತು.

ಮೊನ್ನೆ ಭಾನುವಾರವಷ್ಟೇ ಅಡ್ಮಿಟ್ ಆಗಿದ್ದ ಯಡಿಯೂರಪ್ಪ ಒಂದು ದಿನ ಆಡ್ಮಿಟ್ ಆಗಿ ಮಧುಮೇಹ ನಿಯಂತ್ರಣಕ್ಕೆ ಚಿಕಿತ್ಸೆ ಪಡೆದುಕೊಂಡರು. ಆದ್ರೆ ನಿನ್ನೆ ಮತ್ತೆ ಶೀತ ಜ್ವರ, ರಕ್ತದೊತ್ತಡದಿಂದ ಬಳಲಿ ಆಡ್ಮಿಟ್ ಆಗಿದ್ದಾರೆ. ಇಂದು ಡಿಸ್ ಜಾರ್ಜ್ ಮಾಡಿ ಅಂತಾ ಯಡಿಯೂರಪ್ಪ ಕೇಳಿಕೊಂಡರೂ ವೈದ್ಯರು ಅವರನ್ನು ಕಳಿಸಿಲ್ಲ. ಕೆಮ್ಮು ಕೂಡ ಅವರಿಗೆ ತೊಂದರೆ ಕೊಡುತ್ತಿದೆ. ಅಧಿಕ ರಕ್ತದೊತ್ತಡದಿಂದ ಯಡಿಯೂರಪ್ಪ ಸಹಜವಾಗಿ ಲವಲವಿಕೆ ಕಳೆದುಕೊಂಡಿದ್ದಾರೆ. ಬಿಟ್ಟೂ ಬಿಡದೆ ಕಾಡೋ ಜ್ವರ ಅವರನ್ನು ಮತ್ತಷ್ಟು ಹೈರಾಣಾಗಿಸಿದೆ. ನವೆಂಬರ್ 2ರಂದು ನವ ಕರ್ನಾಟಕ ಪರಿವರ್ತನಾ ಯಾತ್ರೆ ಇರೋದ್ರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇ ಬೇಕಾಗಿದೆ.

ಈ ನಡುವೆ ಬಿಜೆಪಿ ಶಾಸಕ ಶಾಸಕ ವಿಜಯ್ ಕುಮಾರ್ ಸಾಗರ್ ಅಪೋಲೋ ಆಸ್ಪತ್ರೆಗೆ ಭೇಟಿ ಕೊಟ್ಟರು. ಆದರೆ ಭೇಟಿ ಮುಗಿಸಿ ವಾಪಸ್ ಬಂದ ಅವರು, ನನ್ನ ಸ್ನೇಹಿತನ ಮಗ ಆಡ್ಮಿಟ್ ಆಗಿದ್ರು. ಅದಕ್ಕೆ ಬಂದಿದ್ದೆ. ಯಡಿಯೂರಪ್ಪ ಅಡ್ಮಿಟ್ ಹಾಗೂ ಡಿಸ್ಚಾರ್ಜ್ ಬಗ್ಗೆ ಆಸ್ಪತ್ರೆಯವರನ್ನು ಕೇಳಬೇಕು. ನನ್ನ ಬಳಿ ಕೆದಕಿ ಕೇಳಬೇಡಿ ಎಂದು ಹೊರಟೇಬಿಟ್ರು.

 

 

Share This Article
Leave a Comment

Leave a Reply

Your email address will not be published. Required fields are marked *