ಬಂಡಾಯ ಶಾಸಕರ ವಿರುದ್ಧ ದಾಖಲಾದ ದೂರಿನ ಕಥೆಯ ಏನಾಯ್ತು? – ಇಲ್ಲಿದೆ ಪಿನ್ ಟು ಪಿನ್ ಮಾಹಿತಿ

Public TV
2 Min Read

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಶಾಸಕ ಉಮೇಶ್ ಜಾಧವ್ ರಾಜೀನಾಮೆ ಇದೂವರೆಗೂ ಅಂಗೀಕಾರವಾಗಿಲ್ಲ. ಉಮೇಶ್ ಜಾಧವ್ ರಾಜೀನಾಮೆಗೂ ಮುನ್ನವೇ ಕಾಂಗ್ರೆಸ್ ನಾಲ್ವರು ಶಾಸಕರ ವಿರುದ್ಧ ವಿಪ್ ಉಲ್ಲಂಘನೆಯ ದೂರನ್ನು ಸ್ವೀಕರ್ ಅವರಿಗೆ ಸಲ್ಲಿಸಿದ್ದರು. ರಾಜೀನಾಮೆ ನೀಡಿ ಎರಡು ವಾರ ಕಳೆದರೂ ಅಂಗೀಕಾರವಾಗಿಲ್ಲ. ರಾಜೀನಾಮೆ ಅಂಗೀಕಾರವಾಗದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಅಮಾನತು ಶಿಫಾರಸ್ಸಿಗೆ ಒಳಗಾದ ನಾಲ್ವರು ಶಾಸಕರ ಪೈಕಿ ಉಮೇಶ್ ಜಾದವ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿ ಎರಡು ವಾರ ಕಳೆದರೂ ಇನ್ನು ಅಂಗೀಕಾರವಾಗಿಲ್ಲ. ಕಲಬುರಗಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಲು ಮುಂದಾಗಿರುವ ಉಮೇಶ್ ಜಾದವ್ ಗೆ ರಾಜೀನಾಮೆ ಅಂಗೀಕಾರವಾಗದ್ದು ದೊಡ್ಡ ಸಂಕಷ್ಟ ತಂದಿಟ್ಟಿದೆ. ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರವಾಗದೇ ಅತ್ತ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದು ಹೇಗೆ ಎಂಬ ಗೊಂದಲದಲ್ಲಿದ್ದಾರೆ ಎನ್ನಲಾಗುತ್ತಿದೆ.

ರಾಜೀನಾಮೆಗೆ ಮೊದಲೇ ಶಾಸಕ ಸ್ಥಾನ ಅನರ್ಹತೆಗೆ ಕಾಂಗ್ರೆಸ್ ಶಿಫಾರಸ್ಸು ಮಾಡಿದ್ದು ರಾಜಕೀಯ ಜೀವನಕ್ಕೆ ಅಪಾಯಕಾರಿ ಆಗುತ್ತಾ ಎಂಬ ಗೊಂದಲದಲ್ಲಿ ಹಲವು ನಾಯಕರಿದ್ದಾರೆ. ಆದರೆ ಇದು ಕೇವಲ ಉಮೇಶ್ ಜಾದವ್ ಒಬ್ಬರ ಕಾರಣದಿಂದ ಗೊಂದಲವಾಗಿ ಉಳಿದಿದೆ ಎನ್ನುವಂತಿಲ್ಲ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಈ ಮೂಲಕ ಉಳಿದ ಮೂವರು ಬಂಡಾಯಗಾರರಾದ ನಾಗೇಂದ್ರ, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮ್ಟಳ್ಳಿಯವರನ್ನ ಬೆದರಿಸುವ ತಂತ್ರ ಎಂದು ಹೇಳಲಾಗುತ್ತಿದೆ.

ಉಮೇಶ್ ಜಾಧವ್ ರಾಜೀನಾಮೆ ಬೆನ್ನಲ್ಲೇ ಉಳಿದ ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರಂತೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಬಂಡಾಯ ಶಾಸಕರು ರಾಜೀನಾಮೆಗೆ ಮುಂದಾದ್ರೆ, ಪಕ್ಷಾಂತರ ನಿಷೇಧ ಕಾಯ್ದೆ ಅಸ್ತ್ರ ಬಳಸಿ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ರಣತಂತ್ರವನ್ನು ರೂಪಿಸಿದೆ ಎನ್ನಲಾಗುತ್ತಿದೆ. ಒಟ್ಟಾರೆ ಶಾಸಕರ ರಾಜೀನಾಮೆ ಹಾಗೂ ಪಕ್ಷಂತರ ನಿಷೇಧ ಕಾಯ್ದೆ ಅನ್ವಯ ಅನರ್ಹತೆ ಶಿಫಾರಸ್ಸು ಎರಡು ಬೆಳವಣಿಗೆಗಳು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

ಕಾನೂನು ಪಂಡಿತರು ಹೇಳೋದು ಏನು?
ಯಾವುದೇ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಜಾಧವ್ ಈಗ ಸ್ಪರ್ಧಿಸಬಹುದು ಎಂದು ಕಾನೂನು ಪಂಡಿತರು ಹೇಳುತ್ತಾರೆ. ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು ಮಾತ್ರವಲ್ಲದೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ನೀಡಿದ್ದರಿಂದ ಈಗ ರಾಜೀನಾಮೆ ಅಂಗಿಕಾರವಾಗಬೇಕಿತ್ತು. ಈ ಹಿಂದೆ ಸಿದ್ದರಾಮಯ್ಯ ಜಾರಿ ಮಾಡಿದ್ದ ವಿಪ್‍ಗೆ ಮಾನ್ಯತೆ ನೀಡಿ ಜಾಧವ್ ಮತ್ತು ಇತರರು ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಅನರ್ಹತೆ ಪ್ರಕರಣದಲ್ಲೂ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದನ್ನು ಹೊರತು ಪಡಿಸಿ ಕ್ರಮ ಕೈಗೊಳ್ಳಲು ಬೇರೆ ಯಾವುದಾದರೂ ಆಯಾಮಗಳನ್ನು ಸ್ಪೀಕರ್ ಹುಡುಕಬಹುದು. ವಿಳಂಬ ಮಾಡಿದರೂ ಅವರು ರಾಜೀನಾಮೆ ಅಂಗೀಕಾರವಾಗಲೇಬೇಕು ಎಂದು ಕಾನೂನು ಪಂಡಿತರು ಹೇಳುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *