ಸಂಸದ ಜಯಂತ್ ಸಿನ್ಹಾಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ

Public TV
1 Min Read

ರಾಂಚಿ: ಕೇಂದ್ರದ ಮಾಜಿ ಸಚಿವ ಯಶ್ವಂತ್ ಸಿನ್ಹಾ ಪುತ್ರ, ಸಂಸದ ಜಯಂತ್‌ ಸಿನ್ಹಾಗೆ (Jayant Sinha) ಭಾರತೀಯ ಜನತಾ ಪಕ್ಷವು (ಬಿಜೆಪಿ) ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಜಾರ್ಖಂಡ್‌ನ ಹಜಾರಿಬಾಗ್ (Hazaribagh) ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮನೀಶ್ ಜೈಸ್ವಾಲ್ (Manish Jaiswal) ಅವರನ್ನು ಪಕ್ಷ ಘೋಷಣೆ ಮಾಡಿತ್ತು. ಈ ಮೂಲಕ ಲೋಕಸಭಾ ಚುನಾವಣೆಗೆ ಸಿನ್ಹಾ ಅವರಿಗೆ ಟಿಕೆಟ್‌ ನೀಡಲು ನಿರಾಕರಿಸಿತು. ಅಂದಿನಿಂದ ಜಯಂತ್‌ ಸಿನ್ಹಾ ಅವರು ಸಂಘಟನಾ ಕಾರ್ಯ ಮತ್ತು ಪ್ರಚಾರದಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಅಲ್ಲದೇ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡದ ಆರೋಪ ಹಾಗೂ ಈ ಬಾರಿ ಮತದಾನವನ್ನು ಕೂಡ ಮಾಡಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಸಿನ್ಹಾ ನಡೆ ಪಕ್ಷದ ಹೈಕಮಾಂಡ್‌ ಗಮನಕ್ಕೆ ಬಂದಿದ್ದು, ಇದೀಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 2 ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ. ನಿಮ್ಮ ಹಕ್ಕನ್ನು ಚಲಾಯಿಸಲು ಸಹ ನೀವು ಮನಸ್ಸು ಮಾಡಿಲ್ಲ. ಹೀಗಾಗಿ ನಿಮ್ಮ ನಡವಳಿಕೆಯಿಂದಾಗಿ ಪಕ್ಷದ ಇಮೇಜ್‌ಗೆ ಧಕ್ಕೆಯಾಗಿದೆ ಎಂದು ಜಾರ್ಖಂಡ್ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು (Aditya Sahu) ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 2019; ಮೋದಿ ಅಲೆಯಲ್ಲಿ ಮತ್ತೆ ಅರಳಿದ ಕಮಲ

ಇತ್ತೀಚೆಗೆ ಸಿನ್ಹಾ ಅವರ ಪುತ್ರ ಆಶಿಶ್ ಸಿನ್ಹಾ ಅವರು ಜಾರ್ಖಂಡ್‌ನ ಬರ್ಹಿಯಲ್ಲಿ ವಿರೋಧ ಪಕ್ಷದ ಇಂಡಿಯಾ ಬ್ಲಾಕ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಇದಾದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ರ್‍ಯಾಲಿಯಲ್ಲಿ ಆಶಿಶ್ ಸಿನ್ಹಾ ಅವರು ಕಾಂಗ್ರೆಸ್ ಅಭ್ಯರ್ಥಿ ಜೆಪಿ ಪಟೇಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ಈ ವೇಳೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗವಹಿಸಿದ್ದರು.

ಜಯಂತ್ ಸಿನ್ಹಾ ಮತ್ತು ಅವರ ತಂದೆ ಯಶವಂತ್ ಸಿನ್ಹಾ ಅವರು 1998 ರಿಂದ 26 ವರ್ಷಗಳಿಗೂ ಹೆಚ್ಚು ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

Share This Article