ಕೇವಲ ಶೋಕಿಗಾಗಿ ಭತ್ತ ಕಟಾವು: ಸಿಎಂ ಎಚ್‍ಡಿಕೆಗೆ ಬಿಎಸ್‍ವೈ ಟಾಂಗ್

Public TV
1 Min Read

ಬೆಳಗಾವಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇವಲ ಶೋಕಿಗಾಗಿ ಭತ್ತ ಕಟಾವು ಮಾಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಕೇವಲ ಶೋಕಿಗಾಗಿ ಮಂಡ್ಯದಲ್ಲಿ ಭತ್ತ ಕಟಾವು ಮಾಡಿದ್ದಾರೆ. ಅಲ್ಲದೇ ಪ್ರತಿಪಕ್ಷ ಎಂಬ ಗೌರವವನ್ನು ನೀಡದೇ ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಬಗ್ಗೆಯೂ ಹಗುರವಾಗಿ ಮಾತನಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಸರ್ಕಾರದ ಸಚಿವರುಗಳು ಯಾವುದೇ ಕ್ಷೇತ್ರಕ್ಕೆ ಭೇಟಿ ನೀಡದೇ, ನಿರ್ಲಕ್ಷ್ಯ ತೋರಿದ್ದಾರೆ. ಆದರೆ ಬಿಜೆಪಿ 5 ತಂಡಗಳಾಗಿ ರಾಜ್ಯದ ಬರಪೀಡಿತ ಪ್ರದೇಶಗಳನ್ನು ಭೇಟಿ ನೀಡಿ ಪರಿಶೀಲಿಸಿದೆ ಎಂದು ಹೇಳಿದರು.

ದೋಸ್ತಿ ಸರ್ಕಾರದ ವಿರುದ್ಧ ರಣತಂತ್ರವನ್ನು ರೂಪಿಸಿದ್ದೇವೆ. ಅಧಿಕಾರವನ್ನು ಬಿಟ್ಟುತೊಲಗಿ ಎಂಬ ಉದ್ದೇಶದಿಂದ ಸೋಮವಾರ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಕಿಡಿಕಾರಿದರು. ಈ ವೇಳೆ ರಾಜ್ಯದ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಸಮಾವೇಶದ ಮೂಲಕ ಸರ್ಕಾರದ ಗಮನವನ್ನು ಸೆಳೆಯಲಿದ್ದೇವೆ. ಮಂಡ್ಯದಲ್ಲಿ 30 ಜನರ ದುರ್ಮರಣಕ್ಕೆ ಪರಿಹಾರ ನೀಡಿದ್ದಾರೆ. ಆದರೆ ಯರಗಟ್ಟಿಯಲ್ಲಿ 6 ಜನ ರೈತ ಮಹಿಳೆಯರು ಮೃತಪಟ್ಟರೂ ಪರಿಹಾರ ನೀಡಿಲ್ಲ. ಸಿಎಂ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಕುಮಾರಸ್ವಾಮಿ ಎಲ್ಲವನ್ನು ಬಿಟ್ಟು ನಿಂತಿದ್ದಾರೆ. ಕೇವಲ ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆಯೇ ಹೊರತು, ಯಾವುದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಸೋಮವಾರ ನಡೆಯಲಿರುವ ಸಮಾವೇಶಕ್ಕೆ ದೊಡ್ಡ ಪ್ರಮಾಣದಲ್ಲಿ ರೈತರು ಬಂದು ಸೇರಬೇಕೆಂದು ಬಿಎಸ್‍ವೈ ಮನವಿ ಮಾಡಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *