ಕಮಲ ಅರಳಿಸಲು ಕೈ ಘಟಾನುಘಟಿ ನಾಯಕರ ಕ್ಷೇತ್ರಕ್ಕೆ ಇಳಿಯಲಿದ್ದಾರೆ ಶಾ ನಂಬಿಕಸ್ಥ ಆಪ್ತರು!

Public TV
2 Min Read

ಬೆಂಗಳೂರು: ರಾಜ್ಯ ವಿಧಾನಸಭೆಗೆ ಮೇ ಮೊದಲ ವಾರದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಮುಂದಿನ ವಾರವೇ ದಿನಾಂಕ ಪ್ರಕಟವಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಮುಂದಿನ ಸೋಮವಾರದ ಒಳಗೆ ನಿಮ್ಮ ಕ್ಷೇತ್ರಗಳಲ್ಲಿನ ಬಾಕಿ ಕೆಲಸಗಳನ್ನು ಮುಗಿಸಿಕೊಳ್ಳಿ ಎಂದು ಬಿಜೆಪಿ ಶಾಸಕರಿಗೆ ವರಿಷ್ಠರು ಸೂಚಿಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

ಇದರ ಜೊತೆಗೆ, ಮುಂದಿನ ವಿಧಾನಸಭಾ ಚುನಾವಣೆ ಯಾವ ಟಿ-20 ಕ್ರಿಕೆಟ್ ಮ್ಯಾಚಿಗೂ ಕಮ್ಮಿ ಇಲ್ಲದಂತೆ ರೋಚಕದತ್ತ ಸಾಗುತ್ತಿದೆ. ಕಾಂಗ್ರೆಸ್, ಜೆಡಿಎಸ್‍ಗೆ ಹೋಲಿಸಿದರೆ ಬಿಜೆಪಿ ಕೆಲ ದಿನಗಳಿಂದ ತಳಮಟ್ಟದಲ್ಲಿ ಜಾಸ್ತಿ ಕೆಲಸ ಮಾಡುತ್ತಿರುವುದು ಗೋಚರಿಸುತ್ತಿದೆ.

ಎಲೆಕ್ಷನ್ ಘೋಷಣೆಗೂ ಮುನ್ನವೇ ಘಟಾನುಘಟಿಗಳು ಫೀಲ್ಡಿಗಿಳಿದಿದ್ದು ಸಮರಕ್ಕೆ ಅಣಿಯಾಗಿದ್ದಾರೆ. ಅದರಲ್ಲೂ ರಾಜಕೀಯ ಚಾಣಕ್ಯನೆಂದೇ ಹೆಸರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ತಮ್ಮ ನಂಬಿಕಸ್ಥ ಭಂಟರನ್ನು ರಣಾಂಗಣಕ್ಕಿಳಿಸಿದ್ದಾರೆ. ಸ್ಥಳೀಯ ನಾಯಕರಿಗೆ ಕ್ಷೇತ್ರದ ಹೊಣೆಯನ್ನು ನೀಡುವ ಬದಲು  ಬಿಜೆಪಿಯ ರಣನೀತಿ ತಜ್ಞರನ್ನು ಬಿಗ್‍ಫೈಟ್‍ಗೆ ಬಳಸಿಕೊಂಡಿದ್ದಾರೆ.

ಅದರಲ್ಲೂ, ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಟಿಎಂ ಲೇಔಟ್‍ನಿಂದ ಕಣಕ್ಕಿಳಿಯುತ್ತಿರುವ ರಾಮಲಿಂಗಾರೆಡ್ಡಿ ಹಾಗೂ ಪುತ್ರನ ಪುಂಡಾಟಿಕೆಯಿಂದ ವರ್ಚಸ್ಸು ಕಳೆದುಕೊಂಡಿರುವ ಶಾಂತಿನಗರ ಶಾಸಕ ಹ್ಯಾರಿಸ್ ಕ್ಷೇತ್ರ ಸೇರಿದಂತೆ, ಹಲವು ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ತಂತ್ರಗಾರಿಕೆ ರೂಪಿಸಲಾಗಿದೆ.  ಉಸ್ತುವಾರಿಯಾಗಿ ನಿಯೋಜನೆಗೊಂಡ ಹಿನ್ನೆಲೆಯಲ್ಲಿ  ಬಿಟಿಎಂ ಲೇಔಟ್ ವಿಧಾನಸಭೆ ಉಸ್ತುವಾರಿಯನ್ನು ಹೊತ್ತಿರುವ ರಾಜಸ್ಥಾನದ ರಾಜ್ಯಸಭಾ ಸದಸ್ಯ ಭೂಪೇಂದ್ರ ಯಾದವ್  ಶುಕ್ರವಾರ ರಾತ್ರಿ ಆ ಕ್ಷೇತ್ರದಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದ್ದರು.

ಯಾವ ಕ್ಷೇತ್ರದಲ್ಲಿ ಯಾರು ಉಸ್ತುವಾರಿ?
ಟಾರ್ಗೆಟ್ 1: ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಿದ್ದರಾಮಯ್ಯನವರ ಚಾಮುಂಡೇಶ್ವರಿ ವಿಧಾನಸಭೆಯ ಉಸ್ತುವಾರಿಯಾಗಿ ಉತ್ತರಪ್ರದೇಶದ ಮೀರತ್ ಸಂಸದ ರಾಜೇಂದ್ರ ಅಗರವಾಲ್ ನೇಮಕವಾಗಿದ್ದಾರೆ.

ಟಾರ್ಗೆಟ್ 2: ಯತೀಂದ್ರ, ಸಿದ್ದರಾಮಯ್ಯ ಪುತ್ರ
ಈ ಚುನಾವಣೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿರುವ ಯತೀಂದ್ರ ಅವರನ್ನು ಸೋಲಿಸಲು ಎಸ್ಸಿ ಆಯೋಗದ ಅಧ್ಯಕ್ಷ, ಸಂಸದ ರಾಮ್ ಶಂಕರ್ ಕಟೇರಿಯಾ ಅವರನ್ನು ನಿಯೋಜಿಸಲಾಗಿದೆ.

ಟಾರ್ಗೆಟ್ 3: ರಾಮಲಿಂಗಾರೆಡ್ಡಿ, ಗೃಹ ಸಚಿವ
ಬಿಟಿಎಂ ಲೇಔಟ್ ವಿಧಾನಸಭೆ ಉಸ್ತುವಾರಿಯನ್ನು ರಾಜಸ್ಥಾನದ ರಾಜ್ಯಸಭಾ ಸದಸ್ಯ ಭೂಪೇಂದ್ರ ಯಾದವ್ ನೋಡಿಕೊಳ್ಳಲಿದ್ದಾರೆ.

ಟಾರ್ಗೆಟ್ 4: ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಜಮ್ಮು-ಕಾಶ್ಮೀರದ ಉಸ್ತುವಾರಿಯಾಗಿರುವ ಅವಿನಾಶ್ ರೈ ಖನ್ನಾ ಅವರಿಗೆ ಶಾ ಕೊರಟಗೆರೆ ವಿಧಾನಸಭೆಯ ಉಸ್ತುವಾರಿಯನ್ನು ಕೊಟ್ಟಿದ್ದಾರೆ.

ಟಾರ್ಗೆಟ್ 5: ಎಚ್.ಸಿ. ಮಹದೇವಪ್ಪ, ಸಚಿವ
ಲೋಕೋಪಯೊಗಿ ಸಚಿವ ಎಚ್‍ಸಿ ಮಹದೇವಪ್ಪನವರ ಟಿ. ನರಸೀಪುರ ಕ್ಷೇತ್ರದ ಉಸ್ತುವಾರಿಯನ್ನಾಗಿ ಸಂಸದ, ಎಸ್ಸಿ ಆಯೋಗದ ಅಧ್ಯಕ್ಷ ರಾಮ್ ಶಂಕರ್ ಕಟೇರಿಯಾ ಅವರನ್ನು ನಿಯೋಜಿಸಲಾಗಿದೆ.

ಟಾರ್ಗೆಟ್ 6: ಎನ್.ಎ ಹ್ಯಾರಿಸ್, ಶಾಸಕ
ಶಾಂತಿನಗರ ವಿಧಾನಸಭೆಯ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಲಾ. ಗಣೇಶನ್ ನೇಮಕವಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *