ಶಾಸಕರ ಅಮಾನತು, ಮುಸ್ಲಿಂ ಗುತ್ತಿಗೆ ಮೀಸಲು ಬಿಲ್ ವಿರುದ್ಧ ಹೋರಾಟಕ್ಕೆ ಕೇಸರಿ ಪಡೆ ತಯಾರಿ – ಸಸ್ಪೆಂಡ್ ವಾಪಸ್‌ಗೆ ಒತ್ತಾಯ

Public TV
2 Min Read

ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಮಾಡಿದ ಗಲಾಟೆಗೆ ಬಿಜೆಪಿ (BJP) 18 ಮಂದಿ ಶಾಸಕರು ( MLA Suspension) ಅಮಾನತಾಗಿದ್ದಾರೆ. ಸ್ಪೀಕರ್ ಅವರ ಈ ನಿರ್ಧಾರದ ವಿರುದ್ಧ ಈಗ ರಾಜ್ಯ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ.

ಈ ಬಾರಿಯ ಬಜೆಟ್ ಅಧಿವೇಶನ ಸಾಕಷ್ಟು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಿದೆ. ಸುಮಾರು 15 ದಿನಗಳ ಕಾಲ ನಡೆದ ಬಜೆಟ್ ಅಧಿವೇಶನದಲ್ಲಿ ಪ್ರಮುಖ ಕೇಂದ್ರಬಿಂದುವಾಗಿದ್ದು ಪ್ರಭಾವಿ ನಾಯಕರ ಮೇಲೆ ನಡೆಯುತ್ತಿರೋ ಹನಿಟ್ರ್ಯಾಪ್ ಪ್ರಕರಣ. ಇದಕ್ಕೆ ಸಂಬಂಧಿಸಿದಂತೆ ಸರ್ವ ಪಕ್ಷ ಸದಸ್ಯರು ಇದರ ವಿರುದ್ಧ ಹೋರಾಟ ಮಾಡಬೇಕು. ತಪ್ಪು ಮಾಡಿದವರ ವಿರುದ್ಧ ಕ್ರಮ ಜರಿಗಿಸಬೇಕೆಂದು ಸದನದಲ್ಲಿ ಒತ್ತಾಯ ಮಾಡಿದರು. ಈ ವೇಳೆ ​ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವರು ಮಾಹಿತಿ ನೀಡಿದರು. ನಂತರ ಸಿಎಂ ಸಹ ಇದರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸದನಕ್ಕೆ ಹೇಳಿದ್ರು. ಆದ್ರೆ ಇದಕ್ಕೆ ತೃಪ್ತಿಯಾಗದ ಪ್ರತಿ ಪಕ್ಷಗಳು ಸದನದ ಬಾವಿಗಿಳಿದು‌ ಹೋರಾಟ ಮಾಡಿದ್ದರು. ಸ್ಪೀಕರ್ ಕೂತ ಸ್ಥಳಕ್ಕೆ ಹೋಗಿ ಪೇಪರ್ ಹರಿದು ಎಸೆದು ದೊಡ್ಡ ಕೋಲಾಹಲ ಎಬ್ಬಿಸಿದ್ದರು. ಈ ವೇಳೆ ಎಷ್ಟೆ ಬಾರೀ ಸೂಚನೆ ಕೊಟ್ಟರು ಸುಮ್ಮನಾಗದ ಪ್ರತಿಪಕ್ಷದ 18 ಮಂದಿ ಶಾಸಕರ ವಿರುದ್ಧ ಸ್ಫೀಕರ್ ಅಮಾನತು ಅಸ್ತ್ರ ಪ್ರಯೋಗ ಮಾಡಿದರು.

ಶಾಸಕರ ಅಮಾನತು ನಿರ್ಧಾರದ ವಿರುದ್ಧ ಕೆರಳಿ ಕೆಂಡವಾಗಿರುವ ರಾಜ್ಯ ಬಿಜೆಪಿ ನಾಯಕರು ಸ್ವೀಕರ್ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಸ್ವೀಕರ್ ಪಾರದರ್ಶಕವಾಗಿ ಕೆಲಸ ಮಾಡದೇ ಯಾವುದೋ ಒಂದು ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಅರು ತಿಂಗಳು ಶಾಸಕರನ್ನು ಅಮಾನತು ಮಾಡುವುದೆಂದರೆ ಅವರ ಹಕ್ಕನ್ನು ಕಿತ್ತುಕೊಂಡ ಹಾಗೆ. ಅವರು ಜನರ ಸಮಸ್ಯೆಗಳಿಗೆ ಧ್ವನಿಯಾಗಲು ಸದನಕ್ಕೆ ಬರುತ್ತಾರೆ. ಅವರನ್ನೇ ಹೊರ ಹಾಕಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.‌ ಇನ್ನು ಸ್ವಿಕರ್ ಕ್ರಮದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಜೊತೆಗೆ ಈ ರೀತಿ ಸ್ವೀಕರ್ ನಿರ್ಧಾರ ಮಾಡಿದ್ದರ ಹಿಂದೆ ಸರ್ಕಾರದ ನಾಯಕರ ಷ್ಯಢ್ಯಂತ್ರ ಇದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯ 18 ಮಂದಿ ಶಾಸಕರನ್ನ ಅಮಾನತು ಮಾಡಿರುವ ನಿರ್ಧಾರವನ್ನು ಸ್ಪೀಕರ್ ಖಾದರ್ ಸಮರ್ಥಿಸಿ ಕೊಂಡಿದ್ದಾರೆ‌.‌ ಅಮಾನತು ಆಗಿರುವ ಎಲ್ಲಾ ಶಾಸಕರು ನನ್ನ ಸ್ನೇಹಿತರೇ. ನನಗೂ ಸಹ ನೋವಾಗುತ್ತೆ. ಆದರೆ ಸದನಕ್ಕೆ ಗೌರವ ಕೊಡದಿದ್ದರೆ ಈ ರೀತಿ ಕ್ರಮ ಅಗತ್ಯವಾಗಿದೆ ಎಂದು ಸ್ವೀಕರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಸದನಕ್ಕೆ ತನ್ನದೇ ಆದ ಗೌರವವಿದೆ. ಅದನ್ನ ಎಲ್ಲರೂ ಗೌರವಿಸಬೇಕು. ಗೌರವಿಸದೆ ಇದನ್ನೂ ಹೀಗೆ ಮುಂದುವರೆಸಿದರೆ ಆರು ತಿಂಗಳಲ್ಲ ಒಂದು ವರ್ಷ ಅಮಾನತು ಮಾಡುವ ಎಚ್ಚರಿಕೆ ರವಾನೆ ಮಾಡಿದ್ದಾರೆ.

ಒಟ್ಟಾರೆ ಹನಿಟ್ರ್ಯಾಪ್ ಆರೋಪದಲ್ಲಿ ನಾಯಕರು ಸೇಫ್ ಆಟ ಆಡಿದ್ರೆ ಅವರನ್ನ ಬಚಾವ್ ಮಾಡಲು ಹೋದ ಕಮಲ ನಾಯಕರು ಅಮಾನತಾಗೆ ಇದೀಗ ಕ್ಷೇತ್ರದಲ್ಲಿ ಕೂರುವ ಪರಿಸ್ಥಿತಿ ಎದುರಾಗಿದೆ. ಸದ್ಯ ಸ್ವೀಕರ್ ಈ ನಿರ್ಧಾರವನ್ನ ಪುನರ್ ಪರಿಶೀಲನೆ ಮಾಡಿ ಮತ್ತೆ ಸದನಕ್ಕೆ ಬರಲು ಅವಕಾಶ ಕೊಡ್ತಾರಾ ಎಂಬುದಕ್ಕೆ ಮುಂದಿನ ವಾರ ಉತ್ತರ ದೊರೆಯಲಿದೆ.

Share This Article