ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಸರ್ಜಿಕಲ್ ಸ್ಟ್ರೈಕ್ ಬಳಕೆ: ಸುರ್ಜೆವಾಲಾ ಕಿಡಿ

Public TV
2 Min Read

ನವದೆಹಲಿ: ಬಿಜೆಪಿ ದೇಶದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಸೈನಿಕರ ಬಲಿದಾನವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ದೇಶದ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ. ಸೈನಿಕರು ದೇಶಕ್ಕಾಗಿ ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಇದನ್ನು ತನ್ನ ರಾಜಕೀಯ ಉದ್ದೇಶದಲ್ಲಿ ಓಟು ಗಳಿಸಲು ಬಳಸಿಕೊಳ್ಳಬಾರದು. ಆದರೆ ಪ್ರಧಾನಿ ಇದನ್ನು ವೈಭವೀಕರಿಸಿ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಅಲ್ಲದೇ ಮೋದಿ ಸೈನ್ಯದ ಶ್ರಮವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಮೋದಿ ಸರ್ಕಾರ ಜೈ ಜವಾನ್ ಜೈ ಕಿಸಾನ್ ಘೋಷಣೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಭಾರತದ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಹೀಗೆ ಮಾಡಿದ್ದಾರಾ ಎಂದು ಮೋದಿಯನ್ನು ಇಡೀ ದೇಶವೇ ಕೇಳುತ್ತದೆ ಎಂದು ಪ್ರಶ್ನಿಸಿದರು.

ದೇಶದ ಸೈನ್ಯದ ಈ ಕಾರ್ಯದ ಬಗ್ಗೆ ಹೆಮ್ಮೆಪಡುತ್ತದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿಯೂ ಈ ರೀತಿಯ ದಾಳಿಗಳನ್ನು ನಡೆಸಲಾಗಿತ್ತು. ಆದರೆ ಅದರ ಬಗ್ಗೆ ಹೇಳಿಕೊಂಡಿರಲಿಲ್ಲ. ಇಂಥಹ ಸರ್ಜಿಕಲ್ ಸ್ಟ್ರೈಕ್‍ಗಳು ಎರಡು ದಶಕಗಳಿಂದ ಸಾಕಷ್ಟು ನಡೆದಿವೆ ಎಂದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇನೆಯನ್ನು ಅವಮಾನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉಗ್ರರ ಆಕ್ರಮಣ ಹಾಗೂ ಕದನ ವಿರಾಮ ಉಲ್ಲಂಘನೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 

ಕಾಂಗ್ರೆಸ್ ಟೀಕೆಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ತನ್ನ ಅವಧಿಯಲ್ಲಿ ಇಂಥ ಸ್ಟ್ರೈಕ್ ಮಾಡಲಾಗಿಲ್ಲ. ಹಾಗಾಗಿ ಇಂಥ ವಿಡಿಯೋ ಬಿಡುಗಡೆ ಮಾಡಿಲ್ಲ. ಹಾಗೆಯೇ ನಾವೂ ಸಹ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅದು ಹೇಗೆ ಜನ ಬಿಜೆಪಿ ಪರವಾಗಿ ಭಾವನೆಗಳನ್ನು ಬದಲಿಸಿಕೊಳ್ಳಲು ಸಾಧ್ಯವಾಗುತ್ತದೆ? ಒಂದು ವೇಳೆ ಕಾಂಗ್ರೆಸ್ ತನ್ನ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರೆ ಮುಚ್ಚಿಟ್ಟಿದ್ದು ಯಾಕೆ? ಅವರ ಈ ನಡೆ ಹೇಗಿದೆ ಎಂದರೆ ನರಿ ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವ ಹಳೆಯ ಗಾದೆ ಮಾತಿನಂತಿದೆ ಎಂದು ವ್ಯಗ್ಯವಾಡಿದರು.

2016ರ ಸೆಪ್ಟೆಂಬರ್ 28, 29ರ ನಸುಕಿನ ಜಾವ ವೇಳೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿ ಸರ್ಜಿಕಲ್ ದಾಳಿ ನಡೆಸಿ 20ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಡಿಜಿಎಂಒ ಕಾರ್ಯಾಚರಣೆಯ ವಿವರವನ್ನು ನೀಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *