ಜೆಡಿಎಸ್ ಶಾಸಕರಿಗೆ 100 ಕೋಟಿ, ಸಚಿವ ಸ್ಥಾನದ ಆಫರ್ ಬಿಜೆಪಿ ಕೊಟ್ಟಿದೆ: ಕುಮಾರಸ್ವಾಮಿ

Public TV
3 Min Read

ಬೆಂಗಳೂರು: ನಮ್ಮ ಪಕ್ಷದ ಶಾಸಕರಿಗೆ ಬಿಜೆಪಿ 100 ಕೋಟಿ ಮತ್ತು ಸಚಿವ ಸ್ಥಾನದ ಆಫರ್ ನೀಡಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‍ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಶಾಸಕರೆಲ್ಲಾ ಒಗ್ಗಟ್ಟಾಗಿದ್ದೇವೆ. ಒಗ್ಗಟ್ಟು ಮುರಿಯಲು ಬಿಜೆಪಿಯಿಂದ ಸಾಧ್ಯವಿಲ್ಲ. ಕಪ್ಪು ಹಣ ಕೊಡುತ್ತಾರೋ ಅಥವಾ ಬಿಳಿ ಹಣ ಕೊಡುತ್ತಾರೋ ಹೇಳಬೇಕು. ಕಪ್ಪು ಹಣವನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ಸಂವಿಧಾನದ ಸಂಸ್ಥೆಗಳನ್ನು ಬಿಜೆಪಿ ತನ್ನ ಕೈಯಲ್ಲಿ ಇಟ್ಟುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ವ್ಯವಸ್ಥೆ ರಕ್ಷಣೆ ಮಾಡುತ್ತಿಲ್ಲ. ಆಪರೇಷನ್ ಕಮಲ ಮಾಡಿದ್ದವರು ಬಿಜೆಪಿ ಅವರು. ಈಗ ಮತ್ತೆ ಕುದುರೇ ವ್ಯಾಪಾರಕ್ಕೆ ಮುಂದಾಗಿದ್ದಾರೆ. ರಾಜ್ಯದ ಜನತೆ ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

10 ದಿನಗಳಿಂದ ಮಾಧ್ಯಮಗಳಿಗೆ ತೊಂದರೆ ಆಗಿರುವುದಕ್ಕೆ ವಿಷಾಧ ವ್ಯಕ್ತಪಡಿಸುತ್ತೇನೆ. ನಾಡಿನ ಜನತೆಗೆ, ಪಕ್ಷದ ನಾಯಕರು, ಕಾರ್ಯಕರ್ತರು, ಬಿಎಸ್‍ವೈ ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಫಲಿತಾಂಶ ನನಗೆ ಸಂತೋಷ ತಂದಿಲ್ಲ. ನಾಡಿನ ಅಭಿವೃದ್ಧಿಗೆ ಜನ ಉತ್ತಮ ನಿರ್ಧಾರ ಮಾಡಿಲ್ಲ ಅನ್ನೋ ಕೊರಗಿದೆ ಎಂದರು.

ಕೆಲವು ಕೃತಕ ವಿಷಯ ಸೃಷ್ಟಿಸಿದ್ದರಿಂದ ಈ ಫಲಿತಾಂಶ ಬಂದಿದೆ. ಕೆಲವರು ಜೆಡಿಎಸ್ ನ ಮುಗಿಸಲು ಹೋಗಿ ಬಿಜೆಪಿಗೆ 104 ಸ್ಥಾನ ಬಂದಿದೆ. ಸರಿಯಾಗಿ ಇದ್ದಿದ್ದರೆ ಬಿಜೆಪಿಗೆ 80 ಸ್ಥಾನ ಬರುತ್ತಿರಲಿಲ್ಲ. ಮೋದಿ ಅವರು ಬಹುಮತ ಇಲ್ಲದೇ ಇದ್ದರೂ ಸರ್ಕಾರ ಮಾಡಬಾರದು ಅಂತ ಮುಂದಾಗಿದ್ದಾರೆ. ಮೋದಿ ಅಧಿಕಾರವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಮೋದಿ ಅವರ ಸ್ಥಾನಕ್ಕೆ ಅದು ಶೋಭೆ ತರಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ನಮ್ಮನ್ನು ಬೆಂಬಲಿಸಿರುವುದಕ್ಕೆ ವೈಯಕ್ತಿಕ ಕೃತಜ್ಞತೆ ಸಲ್ಲಿಸುತ್ತೇನೆ. ಅಧಿಕಾರ ಹಿಡಿಯುವ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ. ಈ ರೀತಿ ಮುಖ್ಯಮಂತ್ರಿ ಆಗುವ ತೀರ್ಪನ್ನು ಜನ ನೀಡಿದ್ದಾರೆ. ಬಿಜೆಪಿಯವರು ಅಧಿಕಾರ ಹಿಡಿಯಲು ಹೋಗುತ್ತಿದ್ದಾರೆ. ಬಿಜೆಪಿಗೆ 9 ಸ್ಥಾನ ಕೊರತೆ ಇದೆ. ನಾವು 116 ಸ್ಥಾನ ಪಡೆದಿದ್ದೇವೆ. ಜೆಡಿಎಸ್-ಕಾಂಗ್ರೆಸ್ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ರಾಜ್ಯಪಾಲರಿಗೆ ನಾಗಲ್ಯಾಂಡ್, ಮಣಿಪುರಿಯ ಚಿತ್ರಣ ನೀಡಿದ್ದೇವೆ. ಅಲ್ಲಿ ಬಿಜೆಪಿ ಕಡಿಮೆ ಇದ್ದರೂ ಅಧಿಕಾರ ಹಿಡಿದಿದೆ. ಅಲ್ಲಿ ಅವರು ಅಧಿಕಾರ ಪಡೆಯಬಹುದು. ನಾವು ಪಡೆಯಬಾರದಾ ಎಂದು ಪ್ರಶ್ನಿಸಿದರು.

ಪ್ರಧಾನ ಮಂತ್ರಿಯನ್ನ ಸುಲಭವಾಗಿ ಬಿಟ್ಟು ಬಂದ ಕುಟುಂಬ ನಮ್ಮದು. ನನ್ನ ಪಕ್ಷ ಉಳಿಸಿಕೊಳ್ಳಲು ಬಿಜೆಪಿ ಜೊತೆ ಹೊಂದಾಣಿಕೆ ಹಿಂದೆ ಮಾಡಿಕೊಂಡಿದ್ದೆ. ಆಗ ಯಡಿಯೂರಪ್ಪ ಸೇರಿದಂತೆ 40 ಶಾಸಕರು ಕಾಂಗ್ರೆಸ್, ಜೆಡಿಎಸ್ ಸೇರೋಕೆ ಮುಂದಾಗಿದ್ದರು. ಆದರೆ ನಾನು ಅವತ್ತು ಯಡಿಯೂರಪ್ಪರನ್ನ ದಾರಿ ತಪ್ಪಿಸಿಲ್ಲ. ಆದರೆ ಅವತ್ತು ತಂದೆಯವರ ಮಾತಿಗೆ ವಿರುದ್ಧವಾಗಿ ಹೋದೆ. ನಮ್ಮ ತಂದೆಯವರಿಗೆ ಕಪ್ಪು ಚುಕ್ಕಿ ತಂದಿದ್ದೇನೆ. ಶಾಸಕರ ಅಭಿಪ್ರಾಯದ ಮೇರೆಗೆ ಕಾಂಗ್ರೆಸ್ ಜೊತೆ ಹೋಗಲು ತೀರ್ಮಾನ ಮಾಡಿದ್ದೇನೆ. ಎರಡು-ಮೂರು ಶಾಸಕರು ಇನ್ನು ಬರಬೇಕು. ಎರಡು ಪಕ್ಷದ ಕಡೆಯಿಂದ ನನಗೆ ಆಫರ್ ಇದೆ. ಆದರೆ ನನ್ನಿಂದ ಆಗಿರುವ ಕಪ್ಪು ಚುಕ್ಕಿ ತೊಡೆದು ಹಾಕಲು ನಾನು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದೇನೆ ಎಂದು ಹೇಳಿದರು.

ಕರ್ನಾಟಕದಲ್ಲಿ ನಾನೇನು ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆಯಿಲ್ಲ. 2006 ರಲ್ಲಿ ಸಿಎಂ ಆಗಿ ಕೆಲಸ ಮಾಡಿದ್ದೇನೆ. 20 ತಿಂಗಳು ಅಧಿಕಾರ ಮಾಡಿದ್ದೇನೆ. ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದೇನೆ. ಜನರಿಂದ ಆದ ಮುಖ್ಯಮಂತ್ರಿ ಅಲ್ಲ ಅನ್ನೋ ನೋವಿದೆ. ನಾವು ಅಧಿಕಾರಕ್ಕಾಗಿ ಹಿಂದೆ ಹೋದವರಲ್ಲ ಎಂದು ಮೋದಿ ಅವರಿಗೆ ಪ್ರಶ್ನಿಸಿದರು.

ಶೃಂಗೇರಿ ತಾಯಿಯ ಆಶೀರ್ವಾದದಿಂದ ಮತ್ತೆ ಅವಕಾಶ ಬಂದಿದೆ. ದೇವೇಗೌಡರ ಜಾತ್ಯಾತೀತ ನಿಲುವಿಗೆ ಕಪ್ಪು ಚುಕ್ಕಿ ಹೊಡೆದು ಹಾಕಲು ಈ ನಿರ್ಧಾರ ಮಾಡಿದ್ದೇನೆ. ತೃತೀಯ ರಂಗದ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಹೇಳಿದ್ದಾರೆ. ಮಾನಸಿಕವಾಗಿ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಜನರ ಜಾತಿ ವ್ಯಾಮೋಹದಿಂದ ಈ ರಿಸಲ್ಟ್ ಬಂದಿದೆ. ಜನರ ಈ ನಿರ್ಧಾರ ನನ್ನ ವಿಷನ್ ಸಂಪೂರ್ಣ ಮಾಡುವುದಕ್ಕೆ ಆಗುತ್ತೊ ಇಲ್ಲವೋ ಗೊತ್ತಿಲ್ಲ ಎಂದರು.

 

Share This Article
Leave a Comment

Leave a Reply

Your email address will not be published. Required fields are marked *