ಅನಂತ್‍ಕುಮಾರ್, ಸಂತೋಷ್ ವಿರುದ್ಧ ಗರಂ – ಬಳ್ಳಾರಿ ಟೂರ್ ಕೈಬಿಟ್ಟ ಅಮಿತ್ ಶಾ

Public TV
1 Min Read

ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದ ಕಡೆ ಗಳಿಗೆಯಲ್ಲಿ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದಿರೋ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ.

ರಾತ್ರಿ ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರೋ ನಿವಾಸದಲ್ಲಿ 2 ಗಂಟೆ ನಡೆದ ಸಭೆಯಲ್ಲಿ, ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವಿಶೇಷ ಅಂದ್ರೆ ನಿನ್ನೆ ಬೆಂಗಳೂರಲ್ಲೇ ಇದ್ರೂ ಯಡಿಯೂರಪ್ಪ ಮಾತ್ರ ಶಾ ಭೇಟಿಯಾಗಲು ಬರಲೇ ಇಲ್ಲ. ಉಸ್ತುವಾರಿ ಮುರಳೀಧರ್ ರಾವ್, ಚುನಾವಣಾ ಉಸ್ತುವಾರಿಗಳಾದ ಪಿಯೂಷ್ ಗೋಯಲ್, ಪ್ರಕಾಶ್ ಜಾವ್ಡೇಕರ್ ಜೊತೆಗಿದ್ರು.

ಇಂದು ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಶಾ ನಿವಾಸದಲ್ಲಿ ಇಬ್ಬರ ಜೊತೆಗೂ ಪ್ರತ್ಯೇಕ ಸಭೆ, ಸಂಧಾನ ನಡೆಸ್ತಾರೆ. ವರುಣಾದಲ್ಲಿ ತಮ್ಮ ಮಗನಿಗೆ ಟಿಕೆಟ್ ತಪ್ಪಲು ಅನಂತ್‍ಕುಮಾರ್ ಕಾರಣ ಅನ್ನೋ ಸಿಟ್ಟು ತಣ್ಣಾಗಾಗಿಲ್ಲ. ಇದೇ ಕಾರಣಕ್ಕೆ ಯಡಿಯೂರಪ್ಪ ಪ್ರಚಾರದಿಂದಲೂ ದೂರ ಉಳಿದಿದ್ದು, ಇಂದು ಹಾಸನ ಜಿಲ್ಲೆ ಮತ್ತು ಬೆಂಗಳೂರಲ್ಲಿ ನಿಗದಿಯಾಗಿರೋ ಪ್ರಚಾರದಲ್ಲಿ ಭಾಗಿಯಾಗ್ತಾರ ಇಲ್ವೋ ಅನ್ನೋದು ಸಸ್ಪೆನ್ಸ್ ಆಗಿಯೇ ಉಳಿದಿದೆ. ಇದನ್ನೂ ಓದಿ: ಕರ್ನಾಟಕದ ಅಭಿವೃದ್ಧಿಯೇ ಬಿಜೆಪಿ ಅಜೆಂಡಾ -ಅಭ್ಯರ್ಥಿಗಳಿಗೆ ಮೋದಿ ಪ್ರಚಾರ ಪಾಠ

ಇತ್ತ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಪ್ರಯೋಗಿಸ್ತಿರೋ ರೆಡ್ಡಿ ಬ್ರದರ್ಸ್ ಅಸ್ತ್ರಕ್ಕೆ ಅಮಿತ್ ಶಾ ಅಂಜಿದಂತಿದೆ. ಇಂದು ನಿಗದಿಯಾಗಿದ್ದ ಬಳ್ಳಾರಿ ಪ್ರವಾಸವನ್ನು ಕೊನೆ ಕ್ಷಣದಲ್ಲಿ ಶಾ ರದ್ದುಪಡಿಸಿದ್ದಾರೆ. ಬಿಜೆಪಿಗೂ ರೆಡ್ಡಿಗೂ ಸಂಬಂಧವಿಲ್ಲವೆಂದು ಶಾ ಹೇಳಿದ್ದರೂ ಗಣಿಧಣಿಯ ಸಹೋದರರು ಸೇರಿ 6 ಮಂದಿಗೆ ಬಿಜೆಪಿ ಟಿಕೆಟ್ ನೀಡಿದೆ. ಒಂದು ವೇಳೆ ಗಣಿನಾಡಿಗೆ ಹೋದ್ರೆ ರೆಡ್ಡಿಗಳೊಂದಿಗಿನ ನಂಟನ್ನು ಒಪ್ಪಿಕೊಂಡಂತಾಗುತ್ತೆ ಅನ್ನೋದು ಶಾ ಆತಂಕವಾಗಿದ್ದು, ಇಂದು ಕೊಪ್ಪಳ ಜಿಲ್ಲೆಗಷ್ಟೇ ಶಾ ಹೋಗ್ತಾರೆ ಅನ್ನೂ ಮಾಹಿತಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

ಚುನಾವಣೆಗಾಗಿಯೇ ಶಾ ಕರೆಸಿಕೊಂಡಿರುವ ಉತ್ತರ ಭಾರತದ ಬಿಜೆಪಿ ನಾಯಕರು ಗಂಟು ಮೂಟೆ ಸಮೇತ ಆಗಮಿಸಿದ್ದಾರೆ. ಎಲೆಕ್ಷನ್ ಮುಗಿಯೋವರೆಗೆ ಕರ್ನಾಟಕದಲ್ಲೇ ಠಿಕಾಣಿ ಹೂಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *