ಸರಣಿ ಕೊಲೆಗಳು, ಗೋವುಗಳ ಕಳ್ಳಸಾಗಣಿಕೆಗೆ ಯು.ಟಿ.ಖಾದರ್ ಕಾರಣ: ಶೋಭಾ ಕರಂದ್ಲಾಜೆ

Public TV
2 Min Read

– ಮೈತ್ರಿ ಸರ್ಕಾರವೇ ಮುಂದುವರಿಯಲಿ

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು, ಗೋವುಗಳ ಕಳ್ಳಸಾಗಣಿಕೆಗೆ ಸಚಿವ ಯು.ಟಿ.ಖಾದರ್ ಅವರೇ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ನಗರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರಾವಳಿ ಜಿಲ್ಲೆಗಳಲ್ಲಿ ಏನೇ ಅಕ್ರಮ ನಡೆದರೂ ಸಚಿವ ಯು.ಟಿ.ಖಾದರ್ ದುಷ್ಕರ್ಮಿಗಳಿಗೆ ಬೆನ್ನೆಲುಬಾಗಿ ನಿಂತಿರುತ್ತಾರೆ. ಯು.ಟಿ.ಖಾದರ್ ಪಾತ್ರ ಇಲ್ಲದೇ ಅಕ್ರಮಗಳು ನಡೆಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಅಕ್ರಮಗಳನ್ನು ತಡೆಯುತ್ತಿಲ್ಲ ಎಂದು ಆರೋಪಿಸಿದರು.

ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಗೋವುಗಳ ಕಳ್ಳಸಾಗಣಿಕೆ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ. ದೇವಸ್ಥಾನಗಳು, ವಿದೇಶ ಅಂತ ಸುತ್ತುವ ಬದಲು ಸಿಎಂ ಗೋವುಗಳನ್ನೇ ದೇವರೆಂದು ಭಾವಿಸಿ ರಕ್ಷಿಸಲಿ. ಈ ಕೂಡಲೇ ಸ್ಕ್ವಾಡ್ ರಚನೆ ಮಾಡಿ ಗೋವುಗಳ ಕಳ್ಳಸಾಗಣೆ ತಡೆಯಲಿ ಎಂದು ಆಗ್ರಹಿಸಿದರು.

ರಾಜ್ಯ ಬಿಜೆಪಿ ನಾಯಕರು ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡುವ ಸುಳಿವು ಕೊಡುತ್ತಿದ್ದರೆ ಸಂಸದೆ ಶೋಭಾ ಕರಂದ್ಲಾಜೆ ಮಾತ್ರ ತದ್ವಿರುದ್ಧ ಮಾತಾಡಿದ್ದಾರೆ. ಮೈತ್ರಿ ಸರ್ಕಾರ ಬೀಳಿಸುವ ಯಾವ ಪ್ರಯತ್ನವನ್ನೂ ಬಿಜೆಪಿ ಮಾಡುತ್ತಿಲ್ಲ. ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಬರುತ್ತೆ ಎನ್ನುವ ನಮ್ಮ ನಾಯಕರ ಮಾತುಗಳನ್ನು ನಾನು ಒಪ್ಪಲ್ಲ. ರಾಜ್ಯದಲ್ಲಿ ಮೈತ್ರಿಸರ್ಕಾರ ಅತಂತ್ರವಾಗಿರುವುದರಿಂದ ಅದೇ ಮುಂದುವರಿಯಬೇಕು. ಜನರೇ ತಕ್ಕಪಾಠ ಕಲಿಸುತ್ತಾರೆ. ಮೈತ್ರಿ ಸರ್ಕಾರವೇ ಮುಂದುವರಿಯಲಿ. ನಾವು ವಿರೋಧ ಪಕ್ಷದಲ್ಲೇ ಇದ್ದು ಕೆಲಸ ಮಾಡುತ್ತೇವೆ ಎಂದು ಅಚ್ಚರಿಯ ಹೇಳಿಕೆ ಕೊಟ್ಟರು.

ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿಲ್ಲ. ಆದರೆ ಚುನಾವಣೆ ಯಾವಾಗ ಬಂದರೂ ಎದುರಿಸಲು ಸಿದ್ಧ ಇರುತ್ತೇವೆ. ಸದ್ಯಕ್ಕೆ ಚುನಾವಣೆ ನಡೆಯಲ್ಲ. ಮೈತ್ರಿ ಸರ್ಕಾರವೇ ಮುಂದುವರಿಯಲಿ ಎಂದು ಹೇಳಿದರು.

ಮೈತ್ರಿ ನಾಯಕರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾಕ್ ವೋಟ್ ಕೊಟ್ಟಿರಿ ಅಂತ ರಾಜ್ಯದ ಮತದಾರರನ್ನು ಹೆದರಿಸುತ್ತಿದ್ದಾರೆ. ಜನ ತಾಂತ್ರಿಕ ವ್ಯವಸ್ಥೆಯಲ್ಲಿ ವೋಟು ಹಾಕುವುದು ಮತದಾರರ ಹಕ್ಕು. ನೀವು ಕೆಲಸ ಮಾಡದಿದ್ದರೂ ಜನ ಮತ ಹಾಕುತ್ತಾರಾ? ನಿಮ್ಮ ಹೊಣೆ ನಿಭಾಯಿಸಲಿಲ್ಲ ಅದಕ್ಕೆ ಜನ ಮತ ಹಾಕಲಿಲ್ಲ. ಮತದಾರರನ್ನು ಬೆದರಿಸುವ ಕೆಲಸ ಮಾಡಬೇಡಿ ಎಂದು ಮೈತ್ರಿ ನಾಯಕರ ವಿರುದ್ಧ ಗುಡುಗಿದರು.

ಗ್ರಾಮವಾಸ್ತವ್ಯಕ್ಕೆ ಅಂತ ಹೋಗುವುದು ಅಲ್ಲಿ ನಾಟಕ ಆಡುವುದು, ಮತದಾರರನ್ನು ಬೆದರಿಸುವುದು. ಇಷ್ಟಕ್ಕೆ ಯಾಕಾದರೂ ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಸಿಎಂಗೆ ಸಂಸದೆ ಶೋಭಾ ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *