ರಾಹುಲ್‌ ಸದಸ್ಯತ್ವ ರದ್ದುಗೊಳಿಸಿ – ಬಿಜೆಪಿಯಿಂದ ಪ್ರಸ್ತಾಪ ಸಲ್ಲಿಕೆ

2 Min Read

ನವದೆಹಲಿ: ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ (India US Trade Deal) ಸಂಬಂಧವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಬೇಕೆಂದು ಆಗ್ರಹಿಸಿದೆ.

ಸಂಸದ ನಿಶಿಕಾಂತ್‌ ದುಬೆ (Nishakant Dubay) ಅವರು, ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ನಾನು ಪ್ರಸ್ತಾವನೆ ಸಲ್ಲಿಸಿದ್ದೇನೆ. ಆಜೀವ ಚುನಾವಣೆಗಳಲ್ಲಿ (Election) ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಅವರ ವಿರುದ್ಧ ಮಹತ್ವದ ನಿರ್ಣಯ ಮಂಡಿಸಿರುವುದಾಗಿ ಹೇಳಿದ್ದಾರೆ.

ಇದು ವಿಶೇಷ ಹಕ್ಕುಚ್ಯುತಿ ನೋಟಿಸ್ ಅಲ್ಲ. ನಾನು ಒಂದು ಪ್ರಮುಖ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ. ಯಾವುದೇ ದಾಖಲೆ ಇಲ್ಲದೇ ಮಾತನಾಡುತ್ತಿರುವ ರಾಹುಲ್ ಗಾಂಧಿ ದೇಶದ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಸೊರೊಸ್ ಫೌಂಡೇಶನ್, ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್ (USAID) ಮತ್ತು ಫೋರ್ಡ್ ಫೌಂಡೇಶನ್‌ನೊಂದಿಗೆ ಕೈಜೋಡಿಸಿ ವಿದೇಶಗಳಲ್ಲಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: Jeffrey Epstein Files | ನಾನು 3-4 ಬಾರಿ ಭೇಟಿಯಾಗಿದ್ದೆ – ಕೇಂದ್ರ ಸಚಿವ ಹರ್ದೀಪ್‌ ಪುರಿ

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಾತನಾಡಿ, ಆಧಾರ ರಹಿತ ಹೇಳಿಕೆಗಳನ್ನು ನೀಡಿ ಸದನದ ದಾರಿ ತಪ್ಪಿಸಿದ್ದಕ್ಕೆ ನಿಲುವಳಿ ಸೂಚನೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಉಭಯ ಸದನಗಳಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ಸ್ಪಷ್ಟ ನಿಯಮಗಳು ಇವೆ. ಒಬ್ಬ ಸದಸ್ಯರು ಇನ್ನೊಬ್ಬ ಸದಸ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲು ಉದ್ದೇಶಿಸಿದಾಗ ನೀವು ನೋಟಿಸ್ ನೀಡಬೇಕು ಮತ್ತು ಆರೋಪವನ್ನು ಸಾಬೀತುಪಡಿಸಬೇಕು ಎಂದರು.

ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಮೂಲಕ ಸರ್ಕಾರವು ಭಾರತ ಮಾತೆಯನ್ನು ಮಾರಾಟ ಮಾಡಿದೆ. ಈ ವ್ಯಾಪಾರ ಒಪ್ಪಂದ ರೈತರ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ ಎಂದು ರಾಹುಲ್‌ ದೂರಿದ್ದರು.

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಸುತ್ತಿದ್ದಾಗ ರಾಹುಲ್‌ ಗಾಂಧಿ (Rahul Gandhi) ಮಾಜಿ ಸೇನಾ ಮುಖ್ಯಸ್ಥ ಎಂಎಂ ನರಾವಣೆ ಅವರ ಅಪ್ರಕಟಿತ ಆತ್ಮಚರಿತ್ರೆಗೆ ಸಂಬಂಧಿಸಿದಂತೆ ನಿಯತಕಾಲಿಕವೊಂದು ಪ್ರಕಟಿಸಿದ ಲೇಖನವನ್ನು ಪ್ರಸ್ತಾಪಿಸಿದ್ದರು. ಇದನ್ನೂ ಓದಿ: ಅಮೆರಿಕ ಜೊತೆ ವ್ಯಾಪಾರ ಒಪ್ಪಂದ| ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ, ನಿಮಗೆ ನಾಚಿಕೆ ಇಲ್ಲ: ಬಿಜೆಪಿ ವಿರುದ್ಧ ರಾಗಾ ವಾಗ್ದಾಳಿ

ಈ ಹೇಳಿಕೆಗೆ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕಿರಣ್‌ ರಿಜಿಜು ರಾಹುಲ್‌ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ಪೀಕರ್‌ ಓಂ ಬಿರ್ಲಾ ಅವರು ಅಪ್ರಕಟಿತ ಪುಸ್ತಕ ಲೇಖನದ ಬಗ್ಗೆ ನಿಯಮ 349(1) ಅನ್ವಯ ಮಾತನಾಡಲು ಅವಕಾಶ ಇಲ್ಲ ಎಂದು ಹೇಳಿದ್ದರು. ಸ್ಪೀಕರ್‌ ಅವರು ರಾಹುಲ್‌ ಗಾಂಧಿ ಭಾಷಣಕ್ಕೆ ಅವಕಾಶ ನೀಡದ್ದಕ್ಕೆ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿ ಕೋಲಾಹಲ ಎಬ್ಬಿಸಿದ್ದರು.
Share This Article