ಮನೆ ಕೆಲಸದಾಕೆಯ ಅಂತ್ಯಕ್ರಿಯೆ ನೆರವೇರಿಸಿದ ಗಂಭೀರ್

Public TV
1 Min Read

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್, ಬಿಜೆಪಿ ಸಂಸದ ಗೌತಮ್ ಗಂಭೀರ್ ತಮ್ಮ ಮನೆ ಕೆಲಸದ ಮಹಿಳೆ ಸರಸ್ವತಿ ಪತ್ರ (49) ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಒರಿಸ್ಸಾ ನಿವಾಸಿ ಸರಸ್ವತಿ ಏಪ್ರಿಲ್ 21ರಂದು ಮೃತಪಟ್ಟಿದ್ದರು. ಅವರು ಸುಮಾರು ದಿನಗಳಿಂದ ಸಕ್ಕರೆ ಮತ್ತು ರಕ್ತದೊತ್ತಡ ಕಾಯಿಲೆಯೊಂದಿಗೆ ಹೋರಾಡುತ್ತಿದ್ದರು. ಗಂಭೀರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಸರಸ್ವತಿ ಅವರನ್ನು ಕುಟುಂಬದ ಸದಸ್ಯ ಎಂದು ಬಣ್ಣಿಸಿದ್ದಾರೆ.

ಬಿಜೆಪಿ ಸಂಸದ ಗಂಭೀರ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡ ಗಂಭೀರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

”ನನ್ನ ಮಕ್ಕಳ ಬಗ್ಗೆ ಯಾರು ವಿಶೇಷ ಕಾಳಜಿ ವಹಿಸುತ್ತಾರೆ? ಅವರು ಎಂದಿಗೂ ಮನೆಯ ಕೆಲಸದವರಾಗಿ ಇರಲು ಸಾಧ್ಯವಿಲ್ಲ. ಸರಸ್ವತಿ ಅವರು ಕುಟುಂಬದ ಸದಸ್ಯರಾಗಿದ್ದರು. ಅವರ ಕೊನೆಯ ವಿಧಿ ವಿಧಾನಗಳನ್ನು ನೆರವೇರಿಸುವುದು ನನ್ನ ಕರ್ತವ್ಯವಾಗಿತ್ತು. ಜಾತಿ, ಧರ್ಮ, ಪಂಥ ಮತ್ತು ಸಮಾಜಕ್ಕಿಂತ ನಾನು ಮಾನವೀಯತೆಯನ್ನು ಹೆಚ್ಚು ನಂಬುತ್ತೇನೆ. ಉತ್ತಮ ಸಮಾಜವನ್ನು ಸೃಷ್ಟಿಸುವ ದಾರಿ ಇದು. ಭಾರತಕ್ಕೂ ನನಗೂ ಅದೇ ಆಲೋಚನೆಗಳು.. ಓಂ ಶಾಂತಿ” ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಧರ್ಮೇಂದ್ರ ಪ್ರಧಾನ್ ಅವರು ಟ್ವೀಟ್ ಮಾಡಿ, ”ಗಂಭೀರ್ ಅವರ ಕೆಲಸವು ದೂರದಿಂದ ಅನೇಕ ಮನೆಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಬಡ ಜನರ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ. ಈ ಕಾರ್ಯವು ಬಡವರಿಗೆ ಗೌರವವನ್ನು ಹೆಚ್ಚಿಸುತ್ತದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರಸ್ವತಿ ಒಡಿಶಾದ ಜಾಜ್ಪುರ ಜಿಲ್ಲೆಯ ನಿವಾಸಿದ್ದು, ಕಳೆದ 6 ವರ್ಷಗಳಿಂದ ಗಂಭೀರ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಸಕ್ಕರೆ ಮತ್ತು ರಕ್ತದೊತ್ತಡದಿಂದ ಹೋರಾಡುತ್ತಿದ್ದ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಏಪ್ರಿಲ್ 21ರಂದು ಸಾವನ್ನಪ್ಪಿದ್ದರು.

Share This Article
Leave a Comment

Leave a Reply

Your email address will not be published. Required fields are marked *