ಪ್ರಿಯಾಂಕಾ Vs ಬಾನ್ಸುರಿ ಸ್ವರಾಜ್‌ – ʼNational Herald Ki Lootʼ ಕೈಚೀಲ ಹೊತ್ತು ಸಭೆಗೆ ಹಾಜರ್‌

Public TV
4 Min Read

– ಒಂದು ದೇಶ ಒಂದು ಚುನಾವಣೆ, JPC ಸಭೆ ಆರಂಭ
– ಇಂದು ನಾಲ್ವರು ನ್ಯಾಯಾಂಗ ತಜ್ಞರೊಂದಿಗೆ ಸಂವಾದ

ನವದೆಹಲಿ: ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ ಮಾಡಿದಂತೆ ಬಹು ನಿರೀಕ್ಷೆಯ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಅನುಮತಿ ನೀಡುವ ಒಂದು ದೇಶ, ಒಂದು ಚುನಾವಣೆಗೆ (One Nation One Election) ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯ (JPC) ಸಭೆ ಆರಂಭಗೊಂಡಿದೆ.

ಈ ಸಭೆಗೆ ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್‌ ಪುತ್ರಿ, ದೆಹಲಿ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ (Bansuri Swaraj) ಅವರು ʼNational Herald Ki Lootʼ ಎಂದು ಬರೆದಿರುವ ಬ್ಯಾಗ್‌ ಹೊತ್ತುಕೊಂಡು ಸಂಸತ್ತಿನ ಅನೆಕ್ಸ್ ಕಟ್ಟಡಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

ಡಿಸೆಂಬರ್‌ನಲ್ಲಿ ಪ್ರಿಯಾಂಕಾ ವಾದ್ರಾ (Priyanka Wadra) ಅವರು ʼಪ್ಯಾಲೆಸ್ತೀನ್‌ʼಎಂದು ಬರೆದಿರುವ ಬ್ಯಾಗ್‌ ಹಾಕಿಕೊಂಡು ಬಂದಿದ್ದು ಬಹಳ ಚರ್ಚೆಯಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದ್ದರೂ ಅವರ ನೋವಿಗೆ ಮಿಡಿಯದ ಪ್ರಿಯಾಂಕಾ ಮುಸ್ಲಿಮರ ವೋಟ್‌ ಬ್ಯಾಂಕ್‌ಗಾಗಿ ʼಪ್ಯಾಲೆಸ್ತೀನ್‌ʼ ಎಂದು ಬರೆದಿರುವ ಬ್ಯಾಗ್‌ ಧರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಇತ್ತಿಚೇಗೆ ಇಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಇದರಲ್ಲಿ ಎಐಸಿಸಿ ಮಾಜಿ ಅಧ್ಯಕ್ಷರುಗಳಾದ ಸೋನಿಯಗಾಂಧಿ ಮತ್ತು ರಾಹುಲ್‌ಗಾಂಧಿ ಸೇರಿ ಹಲವು ಕಾಂಗ್ರೇಸ್ ನಾಯಕರನ್ನು ಆರೋಪಿಗಳನ್ನಾಗಿಸಿದೆ. ಈ ಬೆಳವಣಿಗೆ ಬೆನ್ನಲೆ ಬನ್ಸೂರಿ ನ್ಯಾಷನಲ್ ಹೆರಾಲ್ಡ್ ಕಿ ಲೂಟ್ ಸಂದೇಶವಿರುವ ಬ್ಯಾಗ್ ಧರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬಾನ್ಸುರಿ ಸ್ವರಾಜ್‌, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮದಲ್ಲಿ ಮೊದಲ ಬಾರಿಗೆ ಭ್ರಷ್ಟಾಚಾರವು ಒಳನುಗ್ಗಿದೆ. ಇಡಿಯ ಚಾರ್ಜ್‌ಶೀಟ್ ಪ್ರಕಾರ, ಕಾಂಗ್ರೆಸ್ ಪಕ್ಷವು ಸಾರ್ವಜನಿಕ ಸೇವೆಗಾಗಿ ಮೀಸಲಾದ ಸಂಸ್ಥೆಗಳನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತು ಅದರ ಉನ್ನತ ನಾಯಕತ್ವವು ಇದಕ್ಕೆ ಜವಾಬ್ದಾರರಾಗಿರಬೇಕು ಎಂದು ಆರೋಪಿಸಿದರು

ಸಂಜೆ 5 ಗಂಟೆಯವರೆಗೆ ಸಭೆ:
ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ನಾಲ್ಕು ಹಂತಗಳಲ್ಲಿ ನ್ಯಾಯಾಂಗ ತಜ್ಞರೊಂದಿಗೆ ಇಂದು ಜೆಪಿಸಿ ಸಭೆ ನಡೆಯಲಿದೆ. ಮೊದಲ ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಹೇಮಂತ್ ಗುಪ್ತಾ, ಎರಡನೇ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್‌ಎನ್ ಝಾ ಅವರೊಂದಿಗೆ ಸಂವಾದ ನಡೆಯಲಿದೆ.
ಮೂರನೇ ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು ಮತ್ತು ಭಾರತದ 21 ನೇ ಕಾನೂನು ಆಯೋಗದ ಅಧ್ಯಕ್ಷರಾದ ಡಾ. ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಭಾಗವಹಿಸಲಿದ್ದಾರೆ.

ಅಂತಿಮ ಅಧಿವೇಶನದಲ್ಲಿ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರೊಂದಿಗೆ ನಡೆಯಲಿದೆ. ಹೊಸ ಕಾನೂನಿನ ಸಾಧಕ ಬಾಧಕಗಳ ಬಗ್ಗೆ ಕಾನೂನು ತಜ್ಞರಿಂದ ಅಭಿಪ್ರಾಯ ಸಂಗ್ರಹವಾಗಲಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ (Law Minister Arjun Meghwal) ಡಿಸೆಂಬರ್‌ನಲ್ಲಿ ಸಂವಿಧಾನ (ನೂರ ಇಪ್ಪತ್ತೊಂದನೇಯ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ್ದರು. ಮಸೂದೆ ಮಂಡನೆಯ ಬೆನ್ನಲ್ಲೇ INDIA ಒಕ್ಕೂಟದ ಸದಸ್ಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಹೆಚ್ಚಿನ ಚರ್ಚೆ ನಡೆಸಲು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಿತ್ತು. ಇದನ್ನೂ ಓದಿ:1 ಲಕ್ಷ ರೂ. ದಾಟಿದ ಚಿನ್ನದ ಬೆಲೆ – ಸಾರ್ವಕಾಲಿಕ ದಾಖಲೆ

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ನೇತೃತ್ವದ ಉನ್ನತ ಮಟ್ಟದ ಸಮಿತಿ 2014ರ ಮಾರ್ಚ್‌ 14 ರಂದು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಸಲ್ಲಿಸಿತ್ತು.

191 ದಿನಗಳ ಸಮಯವನ್ನು ತೆಗೆದುಕೊಂಡು ಅಧ್ಯಯನ ನಡೆಸಿದ್ದ ಸಮಿತಿ 18,000 ಕ್ಕೂ ಅಧಿಕ ಪುಟಗಳ ವರದಿಯನ್ನು ತಯಾರಿಸಿತ್ತು. ವಿವಿಧ ರಾಜಕೀಯ ಪಕ್ಷಗಳು ಮತ್ತು ಪ್ರಮುಖ ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆಯನ್ನು ಸಂಗ್ರಹಿಸಿತ್ತು. ಇದನ್ನೂ ಓದಿ: ಖರ್ಗೆ ಕಾರ್ಯಕ್ರಮಕ್ಕೆ ಬಾರದ ಜನ – ಪಕ್ಷದಿಂದಲೇ ಜಿಲ್ಲಾಧ್ಯಕ್ಷ ಅಮಾನತು

ಭಾರತದಲ್ಲಿ ಸಂಸತ್ತಿನ ಸದಸ್ಯರನ್ನು ಆಯ್ಕೆ ಮಾಡಲು ಸಾರ್ವತ್ರಿಕ ಚುನಾವಣೆಗಳು ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳು ಹಾಲಿ ಸರ್ಕಾರದ ಅವಧಿಯು ಅಂತ್ಯಗೊಂಡಾಗ ಅಥವಾ ಕೆಲವು ಕಾರಣಗಳಿಂದ ವಿಸರ್ಜನೆಯಾದಾಗ ಪ್ರತ್ಯೇಕವಾಗಿ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಹಿಂದಿನಿಂದಲೂ ಒಂದು ರಾಷ್ಟ್ರ, ಒಂದು ಚುನಾವಣೆಯ ಕಲ್ಪನೆಯನ್ನು ಪ್ರತಿಪಾದಿಸುತ್ತಿದ್ದಾರೆ. ಕೋವಿಂದ್ ನೇತೃತ್ವದ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಮಾಜಿ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಇದ್ದರು.

Share This Article