ಮಗು ಅಳದಿದ್ರೆ ತಾಯಿ ಹಾಲು ಕೊಡಲ್ಲ, ಹೋರಾಟ ಮಾಡದಿದ್ರೆ ಸರ್ಕಾರ ಕಣ್ಣು ತೆರೆಯಲ್ಲ: ಬಿಜೆಪಿ ಸಂಸದ

Public TV
1 Min Read

ಚಿಕ್ಕಬಳ್ಳಾಪುರ: ಮಗು ಅಳದಿದ್ರೆ ತಾಯಿ ಹಾಲು ಕೊಡಲ್ಲ, ಅದೇ ರೀತಿ ಜನಸಾಮಾನ್ಯರು ಸಹ ತಮ್ಮ ಕಷ್ಟಗಳನ್ನ ಹೇಳಿಕೊಳ್ಳದಿದ್ದರೆ ಸರ್ಕಾರ ಸಹ ಕಣ್ಣು ತೆರೆಯಲ್ಲ ಎಂದು ಭಾರತ್ ಬಂದ್ ಅಂಗವಾಗಿ ಕಾರ್ಮಿಕ ಸಂಘಟನೆಗಳು ಮಾಡಿದ ಹೋರಾಟಕ್ಕೆ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಬೆಂಬಲ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಚ್ಚೇಗೌಡರು, ದೇಶದಲ್ಲಿ ಶೇ. 50ರಷ್ಟು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಅವರಿಗೆ ದುಡಿಮೆಗೆ ಶ್ರಮಕ್ಕೆ ತಕ್ಕ ಹಾಗೆ ಸರಿಯಾದ ವೇತನ ಸಿಗುತ್ತಿಲ್ಲ. ಗುತ್ತಿಗೆ ಆಧಾರದ ನೌಕರಿಗಳಿದ್ದು ಅವರಿಗೆ ಉದ್ಯೋಗ ಭದ್ರೆತಗಳಿಲ್ಲ. ಇವೆಲ್ಲದರ ನಡುವೆ ಕಾಸ್ಟ್ ಆಫ್ ಲಿವಿಂಗ್ ದಿನೇ ದಿನೇ ಜಾಸ್ತಿ ಆಗುತ್ತಿದೆ. ಕುಟುಂಬ ನಿರ್ವಹಣೆಗೆ ಸಾಕಷ್ಟು ಹಣದ ಅವಶ್ಯಕತೆ ಇದೆ. ಹೀಗಾಗಿ ಕಡಿಮೆ ಸಂಬಳಕ್ಕೆ ದುಡಿಯುವ ಕಾರ್ಮಿಕ ವರ್ಗ ಕಷ್ಟಗಳಿಗೆ ಗುರಿಯಾಗುತ್ತಿದೆ. ಸರ್ಕಾರ ಕಷ್ಟದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆ ಗಮನಹರಿಸಬೇಕಿದ್ದು ಸರಿಯಾದ ಸಂಬಳ ಕೊಡುವ ಕೆಲಸ ಮಾಡಬೇಕಿದೆ ಎಂದರು.

ಬಳಿಕ ಮಾತನಾಡಿದ ಅವರು, ಉದಹಾರಣೆಗೆ ಹೇಳೋದಾದ್ರೆ ಸರ್ಕಾರಿ ಬಸ್ ಚಾಲಕರಿಗೆ 8 ಗಂಟೆ ಕೆಲಸ ಎಂದು ಹೇಳುತ್ತಾರೆ. ಆದರೆ ಅವರು ಒಂದು ಗಾಡಿ ಇಳದ ತಕ್ಷಣ ಮತ್ತೊಂದು ಗಾಡಿ ಹತ್ತಿಸಿ ಡ್ಯೂಟಿ ಮಾಡಿಸ್ತಾರೆ. ಹೀಗೆ 8 ಗಂಟೆ ಅಲ್ಲ 12 ರಿಂದ 16 ಗಂಟೆ ಕೆಲಸ ಮಾಡುತ್ತಾರೆ. ಅವರ ಹೆಚ್ಚುವರಿ ಗಂಟೆಗಳ ಕೆಲಸಕ್ಕೆ ಹೆಚ್ಚುವರಿ ಸಂಬಳ ಯಾರು ಕೊಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಕಾರ್ಮಿಕರು ಹೋರಾಟ ಮಾಡಿ ಎಂದು ನಾನು ಹೇಳಲ್ಲ ಅದಕ್ಕೆ ಪ್ರೋತ್ಸಾಹ ಕೊಡಲ್ಲ. ಹೀಗೆ ಕಾರ್ಮಿಕರಿಗೆ ನಾನಾ ರೀತಿಯ ಸಮಸ್ಯೆಗಳಿದ್ದು, ಕಾರ್ಮಿಕರಿಗೆ ಸರಿಯಾದ ವೇತನ, ಆರೋಗ್ಯ ಸೇವೆ, ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ, ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೊಡುವ ಕೆಲಸ ಸರ್ಕಾರ ಮಾಡಬೇಕಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *