ಸಿಎಂ ಕುರ್ಚಿ ಸ್ಪರ್ಧೆಗಾಗಿ ಕಾಂಗ್ರೆಸ್ ಪಾದಯಾತ್ರೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಟೀಕೆ

Public TV
3 Min Read

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಯ ಸ್ಪರ್ಧೆಯಲ್ಲಿ ನಾ ಮುಂದೆ ತಾ ಮುಂದೆ ಎಂದು ಸ್ಪರ್ಧೆಗೆ ಇಳಿವಂತೆ ಕಾಂಗ್ರೆಸ್‍ನವರು ಭಂಡತನದ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರಿಗೆ ಸಾಮಾನ್ಯ ಜ್ಞಾನದ ಗುಲಗಂಜಿಯೂ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹೆಚ್ಚಳದ ನಡುವೆ ಪಾದಯಾತ್ರೆ ಬೇಡ ಎಂದು ಹೈಕೋರ್ಟ್ ಹೇಳಿದ ವಿಷಯವನ್ನು ಸರ್ಕಾರ ಮೊದಲೇ ತಿಳಿಸಿತ್ತು. ಮುಖ್ಯಮಂತ್ರಿಗಳು, ಸಚಿವರ ಮನವಿ, ಜನರ ಅಭಿಪ್ರಾಯವನ್ನು ಧಿಕ್ಕರಿಸಿ ಪತ್ರಿಕಾ ಸಂಪಾದಕೀಯದ ಸಲಹೆಯನ್ನೂ ಬದಿಗೊತ್ತಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಮೇಕೆದಾಟು ಪಾದಯಾತ್ರೆ ಆರಂಭಿಸಿದರು ಎಂದು ಟೀಕಿಸಿದರು. ಇದನ್ನೂ ಓದಿ: ಕೋವಿಡ್ ಪ್ರಕರಣ ಹೆಚ್ಚಲು ಕಾಂಗ್ರೆಸ್ ಪಾದಯಾತ್ರೆಯೂ ಕಾರಣ‌: ಸಚಿವ ಸುಧಾಕರ್

ಕೋವಿಡ್ ತೀವ್ರವಾಗುತ್ತಿರುವಾಗಲೇ ಈ ಪಾದಯಾತ್ರೆ ಬೇಕಿತ್ತೇ ಪ್ರಶ್ನಿಸಿರುವ ಹೈಕೋರ್ಟ್ ಪಾದಯಾತ್ರೆ ನಿಲ್ಲಿಸಿ ಎಂದು ಸೂಚಿಸಿದೆ. ಅದೇ ರೀತಿ ಪಾದಯಾತ್ರೆ ನಿಲ್ಲಿಸಬಾರದೇ ಎಂದು ರಾಜ್ಯ ಸರ್ಕಾರವನ್ನೂ ಪ್ರಶ್ನಿಸಿದೆ. ಮಾನವೀಯತೆಯ ಲವಲೇಶವಿಲ್ಲದೆ ಈ ಪಾದಯಾತ್ರೆ ಮಾಡಲಾಗುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಶಾಸಕಿ ಮಲ್ಲಾಜಮ್ಮ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಂಜುಳಾ ಮಾನಸ, ವಿಧಾನ ಪರಿಷತ್ ಹಿರಿಯ ಸದಸ್ಯ ಸಿ.ಎಂ.ಇಬ್ರಾಹಿಂ, ಮಾಜಿ ಸಿಎಂ ವೀರಪ್ಪ ಮೊಯಿಲಿ, ಮಾಜಿ ಸಚಿವ ರೇವಣ್ಣ ಅವರಿಗೆ ಈಗಾಗಲೇ ಕೋವಿಡ್ ಬಂದಿದೆ. ಇದರಲ್ಲಿ ಪಾಲ್ಗೊಂಡ ಬಹಳಷ್ಟು ಜನರಿಗೆ ಕೋವಿಡ್ ಬಂದಿದೆ ಎಂದು ತಿಳಿಸಿದರು.

ನಿನ್ನೆ ರಾಮನಗರದಲ್ಲಿ ಪರೀಕ್ಷೆ ಮಾಡಿದ 100 ಜನರ ಪೈಕಿ 30 ಜನರಿಗೆ ಕೋವಿಡ್ ಇದೆ. ಇದು ಇನ್ನೂ ಹೆಚ್ಚಾಗುತ್ತಿದೆ. ಕಾಂಗ್ರೆಸ್‍ನದ್ದು ಪಾದಯಾತ್ರೆಯಲ್ಲ, ಕೋವಿಡ್ ಹೆಚ್ಚಳದ ಜಾತ್ರೆ. ಪಾದಯಾತ್ರೆ ವಿಚಾರ ಹೈಕಮಾಂಡ್‍ಗೆ ಗೊತ್ತಿತ್ತು. ಆದರೆ, ಉಸ್ತುವಾರಿ ಸುರ್ಜೇವಾಲಾ ಅವರು ಪರಿಸ್ಥಿತಿ ಕೈಮೀರಿದರೆ ಪಾದಯಾತ್ರೆ ನಿಲ್ಲಿಸಿ ಎಂದು ಇವತ್ತು ಸೂಚನೆ ಕೊಡುತ್ತಿದ್ದಾರೆ. ಇನ್ನೂ ಎಷ್ಟು ಕೈಮೀರಬೇಕು. ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚಳದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷದ ಹೈಕಮಾಂಡ್ ಪಾತ್ರ ದೊಡ್ಡದಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಬಗ್ಗೆ ನಮಗೆ ನಂಬಿಕೆ ಇಲ್ಲ: ಸುನಿಲ್ ಕುಮಾರ್

ಡಿ.ಕೆ.ಶಿವಕುಮಾರ್‌ರನ್ನು ಸಿಎಂ ಮಾಡಲು ಮತ್ತು ಅವರ ಬೇಳೆ ಬೇಯಿಸಲು ಹೈಕಮಾಂಡ್ ಕೂಡ ಕೋವಿಡ್ ಹೆಚ್ಚಿಸಲು ಸಹಾಯ ಮಾಡುತ್ತಿದೆ. ಪಾದಯಾತ್ರೆ ಮುಂದೂಡಿಕೆಗೆ ಹೈಕಮಾಂಡ್ ಯಾಕೆ ಮುಂದಾಗಲಿಲ್ಲ? ಡಿ.ಕೆ.ಶಿವಕುಮಾರ್ ಒಬ್ಬರಿಗೇ ಪಾದಯಾತ್ರೆಯ ಲಾಭ ಸಿಗಬಾರದೆಂದು ಸಿದ್ದರಾಮಯ್ಯರು ತಮಗೆ ಅನಾರೋಗ್ಯವಿದ್ದರೂ ಕಷ್ಟಪಟ್ಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ರಾಜ್ಯ ಸರ್ಕಾರ ನೂರಾರು ಜನರ ವಿರುದ್ಧ ಪ್ರಕರಣ ದಾಖಲಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕರೇ ನಿಯಮಗಳನ್ನು ಉಲ್ಲಂಘಿಸಿದ್ದು ಸರಿಯೇ? ಎಂದು ಕೇಳಿದರು. ಮೇಕೆದಾಟು ವಿಳಂಬಕ್ಕೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ ಕಾರಣ. 2013ರಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ತಡೆಯಾಜ್ಞೆ ಇರಲಿಲ್ಲ. ಇದರ ಬಗ್ಗೆ ಕಾಂಗ್ರೆಸ್ ವಲಯದಲ್ಲೇ ಚರ್ಚೆ ನಡೆದಿದೆ. ಶಿವಕುಮಾರ್ ಮತ್ತು ಎಂ.ಬಿ.ಪಾಟೀಲರಿಗೆ ಮಂಪರು ಪರೀಕ್ಷೆ ಮಾಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ನೋಟಿಸ್‍ಗೆ ಹೆದರಲ್ಲ, ಜನರ ಹಿತದೃಷ್ಟಿಯಿಂದ ಪಾದಯಾತ್ರೆ ರದ್ದು: ಸಿದ್ದರಾಮಯ್ಯ

ರಾಜ್ಯ ವಕ್ತಾರರು ಹಾಗೂ ವಿಧಾನಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷವು ಮೇಕೆದಾಟು ವಿಚಾರದಲ್ಲಿ ಸಲಹೆಗಳನ್ನು ಸರ್ವಪಕ್ಷ ಸಭೆಯಲ್ಲಿ ತಿಳಿಸಬೇಕಿತ್ತು. ಇವರು ಪರಮ ಸ್ವಾರ್ಥಕ್ಕಾಗಿ ಮತ್ತು ರಾಜಕೀಯ ಲಾಭಕ್ಕಾಗಿ ಈ ಪಾದಯಾತ್ರೆ ಮಾಡಿದ್ದಾರೆ ಎಂದು ಟೀಕಿಸಿದರು. ಮೊದಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿರಿ ಎಂದರು. ಈಗ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಕೋವಿಡ್ ತಗುಲಿದಂತೆ ಕಾಣುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *