ಬಿಜೆಪಿ ಶಾಸಕರ 3 ದಿನ ರೆಸಾರ್ಟ್ ವಾಸ್ತವ್ಯ- 1.15 ಕೋಟಿ ರೂ. ವೆಚ್ಚ

Public TV
1 Min Read

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ತಮ್ಮ ಶಾಸಕರನ್ನು ರೆಸಾರ್ಟ್‍ಗೆ ಕಳುಹಿಸಿದರೆ, ಇತ್ತ ರಿವರ್ಸ್ ಆಪರೇಷನ್ ಭಯದಿಂದ ಬಿಜೆಪಿ ತಮ್ಮ ಶಾಸಕರನ್ನೂ ರೆಸಾರ್ಟ್‍ಗೆ ಕಳುಹಿಸಿದೆ. ಬಿಜೆಪಿ ಶಾಸಕರ ಮೂರು ದಿನಗಳ ರೆಸಾರ್ಟ್ ವೆಚ್ಚ ಬರೋಬ್ಬರಿ 1.15 ಕೋಟಿ ರೂ. ಆಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಬಿಜೆಪಿ ಶಾಸಕರು ಒಟ್ಟು ಎರಡು ರೆಸಾರ್ಟ್ ಗಳಲ್ಲಿ ತಂಗಿದ್ದಾರೆ. ರಮಡ ರೆಸಾರ್ಟ್ ನಲ್ಲಿ ಒಟ್ಟು 73 ಬಿಜೆಪಿ ಶಾಸಕರು ಹಾಗೂ ಸಾಯಿಲೀಲಾದಲ್ಲಿ 20 ಶಾಸಕರು ವಾಸ್ತವ್ಯ ಹೂಡಿದ್ದಾರೆ. ರಮಡದಲ್ಲಿ ಒಂದು ದಿನದ ವಾಸ್ತವ್ಯಕ್ಕೆ 30 ಸಾವಿರ ರೂ. ವೆಚ್ಚವಾಗುತ್ತದೆ. ಮಾತ್ರವಲ್ಲದೆ, ತಿಂಡಿ, ಊಟ, ಮಸಾಜ್ ಎಲ್ಲದಕ್ಕೂ ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ.

ಒಂದು ದಿನಕ್ಕೆ ಒಟ್ಟು ಬಿಜೆಪಿ ಶಾಸಕರ ವೆಚ್ಚ ಸುಮಾರು 35 ರಿಂದ 40 ಲಕ್ಷ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಮೂರು ದಿನಗಳಿಗೆ ಎಲ್ಲ ಶಾಸಕರ ರೆಸಾರ್ಟ್ ವೆಚ್ಚ ಒಟ್ಟು 1.15 ಕೋಟಿ ರೂ.ಗೂ ಹೆಚ್ಚು ಆಗಲಿದೆ ಎಂದು ತಿಳಿದುಬಂದಿದೆ.

ವಾಕಿಂಗ್, ಜಾಗಿಂಗ್ ಮೂಡ್‍ನಲ್ಲಿ ಶಾಸಕರು
ರಾಜಾನುಕುಂಟೆ ಸಮೀಪದ ರಮಡ ರೆಸಾರ್ಟ್‍ನಲ್ಲಿ ತಂಗಿರುವ ಶಾಸಕರು ಬೆಳಗ್ಗೆ ಫ್ರೆಶ್ ಮೂಡ್‍ನಲ್ಲಿದ್ದಾರೆ. ಇಂದು ಬೆಳಗ್ಗೆ ಎದ್ದು ವಾಕಿಂಗ್, ಜಾಗಿಂಗ್ ಮಾಡುವ ಮೂಲಕ ತಮ್ಮ ದಿನವನ್ನು ಆರಂಭಿಸಿದ್ದಾರೆ. ಪರಸ್ಪರ ಮಾತನಾಡುತ್ತಾ, ಎಂಜಾಯ್ ಮಾಡುತ್ತಾ ತಮ್ಮ ದಿನವನ್ನು ಆರಂಭಿಸಿದ್ದಾರೆ.

ರಾಜ್ಯ ರಾಜಕೀಯದಲ್ಲೀಗ ಮೂರು ಪಕ್ಷ, 3 ದಿನ, 3 ಪ್ಲಾನ್ ನಡೀತಿದೆ. ದೋಸ್ತಿ ಸರ್ಕಾರ ವಿಶ್ವಾಸಮತದ ವಿಶ್ವಾಸದಲ್ಲಿರುವ ಕಾರಣ ಬಿಜೆಪಿ ಶಾಕ್‍ಗೆ ಒಳಗಾಗಿ ರಿವರ್ಸ್ ಆಪರೇಷನ್ ಭಯದಿಂದ ರೆಸಾರ್ಟ್ ರಾಜಕಾರಣದ ಮೊರೆ ಹೋಗಿದೆ. ಕಾಂಗ್ರೆಸ್ ನಾಯಕರಿಗೆ ರೆಸಾರ್ಟ್ ಸಿಕ್ಕಿಲ್ಲ. ಹೀಗಾಗಿ ಗೊರಗುಂಟೆಪಾಳ್ಯದ ತಾಜ್ ವಿವಾಂತ ಹೋಟೆಲ್‍ನಲ್ಲಿ ತನ್ನ ಶಾಸಕರನ್ನು ಕಾಂಗ್ರೆಸ್ ಇರಿಸಿದೆ. ಜೆಡಿಎಸ್ ಶಾಸಕರು ಕಳೆದ ನಾಲ್ಕು ದಿನಗಳಿಂದ ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್‍ಶೈರ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದಾರೆ. ಸೋಮವಾರ ಸದನ ಆರಂಭವಾಗುವವರೆಗೆ ಎಲ್ಲರನ್ನು ರೆಸಾರ್ಟ್ ಗಳಲ್ಲಿ ಇರಿಸಿಕೊಳ್ಳಲಾಗುತ್ತದೆ. ಅಲ್ಲದೆ ಎಲ್ಲಾ ಕಡೆ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *